ಡೈಲಿವಾರ್ತೆ: 09/ನ./2026

ಉಡುಪಿ: ಪೆಟ್ರೋಲ್ ಬಂಕ್‌ನಲ್ಲಿ ಮದ್ಯಪಾನಕ್ಕೆ ಆಕ್ಷೇಪ: ಬಂಕ್ ಮಾಲಕರ ಸಂಬಂಧಿ ಮೇಲೆ ಐವರಿಂದ ಮಾರಣಾಂತಿಕ ಹಲ್ಲೆ

ಉಡುಪಿ: ನಗರದ ಗುಂಡಿಬೈಲ್‌ನ ಪೆಟ್ರೋಲ್ ಬಂಕ್ ಆವರಣದಲ್ಲಿ ಮದ್ಯಪಾನ ಮಾಡುತ್ತಿದ್ದುದನ್ನು ಪ್ರಶ್ನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬಂಕ್ ಮಾಲಕರ ಸಂಬಂಧಿಯ ಮೇಲೆ ಐವರು ಸೇರಿಕೊಂಡು ಹಲ್ಲೆ ನಡೆಸಿರುವ ಘಟನೆ ನ.7ರ ರಾತ್ರಿ ನಡೆದಿದೆ.

ಹಲ್ಲೆಯಿಂದ ಗಾಯಗೊಂಡ ನಿಟ್ಟೂರು ನಿವಾಸಿ ಆಶಿಶ್ ಶೆಟ್ಟಿ (44) ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಘಟನೆಯ ವಿವರದ ಪ್ರಕಾರ, ಶನಿವಾರ ರಾತ್ರಿ ಸುಮಾರು 10 ಗಂಟೆಯ ವೇಳೆಗೆ ಆಕಾಶ್ ಎಂಬ ಖಾಸಗಿ ಬಸ್ ಚಾಲಕ ಪೆಟ್ರೋಲ್ ಬಂಕ್ ಆವರಣದಲ್ಲಿ ಬಸ್ ನಿಲ್ಲಿಸಿ ಮದ್ಯಪಾನ ಮಾಡುತ್ತಿದ್ದ. ಇದನ್ನು ಗಮನಿಸಿದ ಆಶಿಶ್ ಶೆಟ್ಟಿ, ಸಾರ್ವಜನಿಕ ಸ್ಥಳವಾಗಿರುವ ಬಂಕ್ ಆವರಣದಲ್ಲಿ ಮದ್ಯಪಾನ ಮಾಡದಂತೆ ಆಕ್ಷೇಪ ವ್ಯಕ್ತಪಡಿಸಿ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಪರಸ್ಪರ ತಳ್ಳಾಟವೂ ಸಂಭವಿಸಿತ್ತು.

ಈ ಘಟನೆಯ ಬಳಿಕ ಕೆಲ ಹೊತ್ತಿನಲ್ಲೇ ನಾಲ್ವರು ಕಾರಿನಲ್ಲಿ ಹಾಗೂ ಮತ್ತೋರ್ವ ಲಾರಿಯಲ್ಲಿ ಪೆಟ್ರೋಲ್ ಬಂಕ್‌ಗೆ ಆಗಮಿಸಿದ್ದಾರೆ. ಲಾರಿಗೆ ಸುಮಾರು ₹3,000 ಮೌಲ್ಯದ ಡೀಸೆಲ್ ತುಂಬಿಸಿಕೊಂಡ ನಂತರ ಆರೋಪಿಗಳು ಏಕಾಏಕಿ ಆಶಿಶ್ ಶೆಟ್ಟಿ ಅವರ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಆರೋಪಿಗಳು ಕೈಗಳಿಂದ ಹಲ್ಲೆ ನಡೆಸಿ, ಕಾಲಿನಿಂದ ತುಳಿದಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಪುನೀತ್ ಎಂಬಾತ ತನ್ನ ಕೈಯಲ್ಲಿದ್ದ ಕಡಗದಿಂದ ಆಶಿಶ್ ಅವರ ತಲೆಗೆ ಬಲವಾಗಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಏಕಾಏಕಿ ನಡೆದ ಈ ಹಲ್ಲೆಯಿಂದ ಗಾಯಗೊಂಡ ಆಶಿಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಇನ್ನು, ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಪುನೀತ್ ಫಲಿಮಾರ್ ಮತ್ತು ಆತನ ಸಹಚರರ ತಂಡವು ಕೆಲವು ತಿಂಗಳ ಹಿಂದೆ ಮಲ್ಪೆ ಬೀಚ್‌ನಲ್ಲಿ ಹಿಂದೂ ಸಂಘಟನೆಯ ಮುಖಂಡರೊಬ್ಬರಿಗೆ ಚೂರಿಯಿಂದ ಇರಿದ ಪ್ರಕರಣದಲ್ಲೂ ಭಾಗಿಯಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಗುಂಡಿಬೈಲ್ ಪೆಟ್ರೋಲ್ ಬಂಕ್‌ನಲ್ಲಿ ನಡೆದ ಹಲ್ಲೆ ಪ್ರಕರಣ ಮತ್ತಷ್ಟು ಗಮನ ಸೆಳೆದಿದೆ.