


ಡೈಲಿವಾರ್ತೆ: 10/ನ./2026




ಕೂಳೂರು-ತಣ್ಣೀರುಬಾವಿ ತಿರುವು ಅಪಘಾತಗಳ ತಾಣ: NHAI ನಿರ್ಲಕ್ಷ್ಯಕ್ಕೆ SDPI ತೀವ್ರ ಆಕ್ರೋಶ:
ಅಪಘಾತ ತಡೆಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ರಸ್ತೆ ತಡೆದು ಬೃಹತ್ ಪ್ರತಿಭಟನೆ: ಉಸ್ಮಾನ್ ಗುರುಪುರ ಎಚ್ಚರಿಕೆ!

ಮಂಗಳೂರು, ನ.10: ನಗರದ ಕೂಳೂರು ಬ್ರಿಡ್ಜ್ನಿಂದ ತಣ್ಣೀರುಬಾವಿ ಕಡೆಗೆ ಸಂಪರ್ಕ ಕಲ್ಪಿಸುವ ತಿರುವು ನಿರಂತರ ಅಪಘಾತಗಳಿಂದಾಗಿ ಅಪಾಯಕಾರಿ ವಲಯವಾಗಿ ಮಾರ್ಪಟ್ಟಿದ್ದು, ಹಲವು ಜೀವಗಳು ಬಲಿಯಾಗಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಭಾಗದಲ್ಲಿ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಸಂಬಂಧಪಟ್ಟ ಇಲಾಖೆಗಳು ವಿಫಲವಾಗಿವೆ ಎಂದು SDPI ಆರೋಪಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಉಸ್ಮಾನ್ ಗುರುಪುರ, ಕೂಳೂರು ಬ್ರಿಡ್ಜ್ನಿಂದ ತಣ್ಣೀರುಬಾವಿ ಕಡೆಗೆ ತಿರುಗುವ ಸ್ಥಳ ರಸ್ತೆ ವಿನ್ಯಾಸದ ದೋಷದಿಂದಾಗಿ ಅತ್ಯಂತ ಅಪಾಯಕಾರಿಯಾಗಿದೆ. ವಾಹನ ಸವಾರರಿಗೆ ಮುನ್ನೆಚ್ಚರಿಕೆ ನೀಡುವ ಸೂಚನಾ ಫಲಕಗಳಿಲ್ಲದೆ, ವೇಗ ನಿಯಂತ್ರಣಕ್ಕೆ ಸ್ಪೀಡ್ ಬ್ರೇಕರ್ ಅಥವಾ ರಂಬಲ್ ಸ್ಟ್ರಿಪ್ಗಳ ವ್ಯವಸ್ಥೆಯೂ ಇಲ್ಲ. ರಿಫ್ಲೆಕ್ಟರ್ಗಳ ಅಳವಡಿಕೆ ಹಾಗೂ ಸಮರ್ಪಕ ಬೀದಿದೀಪಗಳ ವ್ಯವಸ್ಥೆಯೂ ಇಲ್ಲದಿರುವುದರಿಂದ ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ತೀವ್ರ ಅಪಾಯ ಎದುರಿಸುವಂತಾಗಿದೆ ಎಂದು ದೂರಿದ್ದಾರೆ.
ನಿರಂತರ ಅಪಘಾತಗಳು ಸಂಭವಿಸಿ ಅಮೂಲ್ಯ ಜೀವಗಳು ಬಲಿಯಾಗುತ್ತಿದ್ದರೂ NHAI ಮತ್ತು ಜಿಲ್ಲಾಡಳಿತ ಮೌನ ವಹಿಸಿರುವುದು ಆಡಳಿತಾತ್ಮಕ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಇನ್ನೆಷ್ಟು ಅಪಘಾತಗಳು ಸಂಭವಿಸಬೇಕು? ಇನ್ನೆಷ್ಟು ಕುಟುಂಬಗಳು ತಮ್ಮವರನ್ನು ಕಳೆದುಕೊಳ್ಳಬೇಕು? ಜನರ ಜೀವಕ್ಕೆ ಬೆಲೆ ಇಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಅಪಘಾತಗಳ ಸರಣಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೂಳೂರು ಬ್ರಿಡ್ಜ್–ತಣ್ಣೀರುಬಾವಿ ತಿರುವಿನಲ್ಲಿ ವೈಜ್ಞಾನಿಕ ಮಾದರಿಯಲ್ಲಿ ರಸ್ತೆ ದುರಸ್ತಿ ಕೈಗೊಳ್ಳಬೇಕು. ವಾಹನಗಳ ವೇಗ ನಿಯಂತ್ರಣಕ್ಕೆ ಸ್ಪೀಡ್ ಬ್ರೇಕರ್ ಹಾಗೂ ರಂಬಲ್ ಸ್ಟ್ರಿಪ್ಗಳನ್ನು ಅಳವಡಿಸುವುದರ ಜತೆಗೆ ಅಗತ್ಯ ಸೂಚನಾ ಫಲಕಗಳು, ರಿಫ್ಲೆಕ್ಟರ್ಗಳು ಮತ್ತು ಸಮರ್ಪಕ ಬೀದಿದೀಪಗಳ ವ್ಯವಸ್ಥೆ ಕಲ್ಪಿಸಬೇಕು. ಈ ಪ್ರದೇಶದಲ್ಲಿ ಸಂಭವಿಸಿರುವ ಅಪಘಾತಗಳ ಕುರಿತು ಸಮಗ್ರ ಮಾಹಿತಿ ಒಳಗೊಂಡ ಶ್ವೇತಪತ್ರ ಹೊರಡಿಸಿ, ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಪಘಾತಗಳಲ್ಲಿ ಮೃತಪಟ್ಟವರ ಕುಟುಂಬಗಳಿಗೆ NHAI ವತಿಯಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು SDPI ಆಗ್ರಹಿಸಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಅಪಘಾತ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ SDPI ವತಿಯಿಂದ ಕೂಳೂರು ಬ್ರಿಡ್ಜ್ ಬಳಿ ಬೃಹತ್ ಪ್ರತಿಭಟನೆ ನಡೆಸುವುದರ ಜತೆಗೆ ರಸ್ತೆ ತಡೆ ಹೋರಾಟಕ್ಕೂ ಮುಂದಾಗಲಾಗುವುದು ಎಂದು ಉಸ್ಮಾನ್ ಗುರುಪುರ ಎಚ್ಚರಿಕೆ ನೀಡಿದ್ದಾರೆ.

