


ಡೈಲಿವಾರ್ತೆ: 10/ನ./2026




ಶಿರಾಡಿಘಾಟ್ನ 100 ಅಡಿ ಆಳದ ಕಂದಕದಲ್ಲಿ ನಳಿನಿ, ಶಂಕರ್ ಶವ ಪತ್ತೆ: ಏಳು ಕೊಲೆ, ಏಳು ಶವಗಳ ಪತ್ತೆ!

ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ಕುಟುಂಬದ ಏಳು ಮಂದಿಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿರಾಡಿಘಾಟ್ನ ಮಾರನಹಳ್ಳಿ ಸಮೀಪದ ಸುಮಾರು 100 ಅಡಿ ಆಳದ ಕಂದಕಕ್ಕೆ ಎಸೆಯಲಾಗಿದ್ದ ನಳಿನಿ ಹಾಗೂ ಶಂಕರ್ ಅವರ ಮೃತದೇಹಗಳನ್ನು ಪೊಲೀಸರು ಸೋಮವಾರ ಹೊರತೆಗೆದಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಹತ್ಯೆಗೀಡಾದ ಏಳು ಮಂದಿಯ ಮೃತದೇಹಗಳನ್ನೂ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಇಂದುಶೇಖರ್ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಶಿರಾಡಿಘಾಟ್ನಲ್ಲಿ ಶವಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ, ಮೃತದೇಹಗಳನ್ನು ಎಸೆದಿದ್ದ ನಿಖರ ಸ್ಥಳವನ್ನು ಆರಂಭದಲ್ಲಿ ಗುರುತಿಸದ ಆರೋಪಿ, ಪೊಲೀಸರನ್ನು ವಿವಿಧೆಡೆ ಕರೆದೊಯ್ದು ಸುಮಾರು ಐದಾರು ಸ್ಥಳಗಳನ್ನು ತೋರಿಸಿದ್ದಾನೆ ಎನ್ನಲಾಗಿದೆ. ಈ ಮೂಲಕ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾನೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಕೊನೆಗೆ ಮೃತದೇಹಗಳನ್ನು ಎಸೆದಿದ್ದ ಸ್ಥಳವನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮಲ್ಲೇಶ್ವರಂ ಎಎಸ್ಪಿ ಪ್ರಭಾವತಿ ಅವರ ನೇತೃತ್ವದಲ್ಲಿ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರನಹಳ್ಳಿ ಸಮೀಪ ಕಾರ್ಯಾಚರಣೆ ನಡೆಸಲಾಯಿತು. ಸುಮಾರು 100 ಅಡಿ ಆಳದ ಕಂದಕಕ್ಕೆ ಹಗ್ಗದ ನೆರವಿನಿಂದ ಇಳಿದ ಪೊಲೀಸರು, ನಳಿನಿ ಮತ್ತು ಶಂಕರ್ ಅವರ ಮೃತದೇಹಗಳನ್ನು ಹೊರತೆಗೆದರು. ಬಳಿಕ ಎರಡೂ ಮೃತದೇಹಗಳನ್ನು ಆಂಬ್ಯುಲೆನ್ಸ್ ಮೂಲಕ ಹಾಸನದ ಹಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಲಾಯಿತು.
ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಆರಂಭವಾಗುವುದಕ್ಕೂ ಸುಮಾರು ಒಂದು ಗಂಟೆ ಮುಂಚಿತವಾಗಿ ಆರೋಪಿ ಇಂದುಶೇಖರ್ನನ್ನು ಪೊಲೀಸರು ಸ್ಥಳದಿಂದ ಕರೆದೊಯ್ದಿದ್ದರು. ಕಾರ್ಯಾಚರಣೆಯ ವೇಳೆ ನಳಿನಿ ಅವರ ಕುಟುಂಬಸ್ಥರು ಸ್ಥಳದಲ್ಲಿದ್ದು, ಪೊಲೀಸರು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಮುಂದುವರಿಸಿದ್ದಾರೆ.
ಶಿರಾಡಿಘಾಟ್ನಲ್ಲಿ ನಳಿನಿ ಮತ್ತು ಶಂಕರ್ ಅವರ ಮೃತದೇಹಗಳು ಪತ್ತೆಯಾಗಿರುವುದನ್ನು ದೃಢಪಡಿಸಿರುವ ಬೆಂಗಳೂರು ನಗರ ಉತ್ತರ ವಿಭಾಗದ ಡಿಸಿಪಿ ನ್ಯಾಮಗೌಡ, ಹತ್ಯೆಗೀಡಾದ ಎಲ್ಲ ಏಳು ಮಂದಿಯ ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು, ಶಿರಾಡಿಘಾಟ್ನಲ್ಲಿ ದೊರೆತ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
15 ದಿನಗಳ ಅವಧಿಯಲ್ಲಿ ಏಳು ಮಂದಿಯ ಹತ್ಯೆ:

ಒಂದೇ ಕುಟುಂಬದ ಏಳು ಮಂದಿಯನ್ನು 15 ದಿನಗಳ ಅವಧಿಯಲ್ಲಿ ಆರೋಪಿ ಇಂದುಶೇಖರ್ ರುಬ್ಬುಗಲ್ಲಿನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದ ಭೀಕರ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಪತ್ನಿ ಹಾಗೂ ಆಕೆಯ ಕುಟುಂಬದ ಸದಸ್ಯರನ್ನು ಬೆಂಗಳೂರಿನ ಮನೆಯಲ್ಲೇ ಬರ್ಬರವಾಗಿ ಕೊಲೆಗೈದ ಬಳಿಕ ಮೃತದೇಹಗಳನ್ನು ವಿವಿಧ ಪ್ರದೇಶಗಳಲ್ಲಿ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಎನ್ನಲಾಗಿದೆ.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೊದಲು ನಂದಿಬೆಟ್ಟದ ಸಮೀಪ ಬಾಲಕನ ಮೃತದೇಹವನ್ನು ಪತ್ತೆಹಚ್ಚಿದ್ದರು. ನಂತರ ತಮಿಳುನಾಡಿನ ಸೇಲಂ ಸಮೀಪದ ಅರಣ್ಯ ಪ್ರದೇಶದಲ್ಲಿ ಪತ್ನಿ ಮತ್ತು ಅತ್ತೆಯ ಮೃತದೇಹಗಳು ಪತ್ತೆಯಾಗಿದ್ದವು. ಆ ಬಳಿಕ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಿವಕುಮಾರ್ ಹಾಗೂ ದಿವ್ಯಾ ಅವರ ಮೃತದೇಹಗಳನ್ನು ಪತ್ತೆಹಚ್ಚಲಾಗಿತ್ತು.
ಇದೀಗ ಶಿರಾಡಿಘಾಟ್ನ ಕಂದಕದಲ್ಲಿ ಉಳಿದ ಇಬ್ಬರ ಮೃತದೇಹಗಳೂ ಪತ್ತೆಯಾಗುವುದರೊಂದಿಗೆ ಪ್ರಕರಣದ ಏಳು ಸಂತ್ರಸ್ತರ ಮೃತದೇಹಗಳ ಶೋಧ ಕಾರ್ಯ ಪೂರ್ಣಗೊಂಡಿದೆ. ಕುಟುಂಬವೊಂದನ್ನೇ ಗುರಿಯಾಗಿಸಿಕೊಂಡು ನಡೆದಿರುವ ಈ ಸಾಮೂಹಿಕ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದು, ಹತ್ಯೆಯ ಹಿಂದಿನ ಸಂಪೂರ್ಣ ಕಾರಣಗಳು ಹಾಗೂ ಘಟನೆಗೆ ಸಂಬಂಧಿಸಿದ ಇತರ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.

