ಡೈಲಿವಾರ್ತೆ: 10/ನ./2026

ವಕ್ವಾಡಿ ಗುರುಕುಲದಲ್ಲಿ ‘ಗೋಕುಲಂ ಸದ್ಮನ’ ನೂತನ ಗೋಶಾಲೆ ಉದ್ಘಾಟನೆ

ಕೋಟೇಶ್ವರ: ವಕ್ವಾಡಿ ಇಲ್ಲಿನ ಗುರುಕುಲ ವಿದ್ಯಾ ಸಂಸ್ಥೆಯ ಆವರಣದಲ್ಲಿ ಪುಂಗನೂರು ತಳಿಯ ಅಪರೂಪದ ಗಿಡ್ಡ ಹಸುಗಳ ಸಂರಕ್ಷಣೆಗಾಗಿ ನಿರ್ಮಿಸಲಾದ ‘ಗುರುಕುಲ ಗೋಕುಲಂ ಸದ್ಮನ’ ನೂತನ ಗೋಶಾಲೆಯ ಉದ್ಘಾಟನಾ ಸಮಾರಂಭ ನ.9ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ತಳಿಯ ವಿಶೇಷ ಹಸುಗಳ ಪಾಲನೆ ಮತ್ತು ಸಂರಕ್ಷಣೆಯ ಉದ್ದೇಶದಿಂದ ವಿದ್ಯಾಸಂಸ್ಥೆಯ ಮುಂಭಾಗದಲ್ಲಿ ಸುಂದರವಾದ ಗೋಶಾಲೆಯನ್ನು ನಿರ್ಮಿಸಲಾಗಿದೆ. ದೀಪಾವಳಿ ಹಬ್ಬದ ಸಂಭ್ರಮದ ಅಂಗವಾಗಿ ಗೋ ಪೂಜೆಯ ದಿನದಂದು ಹಟ್ಟಿಯಂಗಡಿ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಾಲಚಂದ್ರ ಭಟ್ ಅವರು ದಂಪತಿ ಸಮೇತರಾಗಿ ಆಗಮಿಸಿ ಗೋಶಾಲೆಯನ್ನು ಉದ್ಘಾಟಿಸಿದರು.
ಬಳಿಕ ಪುಂಗನೂರು ತಳಿಯ ಹಸುಗಳಿಗೆ ಪಾದಪೂಜೆ ನೆರವೇರಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಾಲಚಂದ್ರ ಭಟ್ ಅವರು, ‘ಗಾವೋ ವಿಶ್ವಸ್ಯ ಮಾತರಃ’ ಎಂಬ ಉಕ್ತಿಯಂತೆ ಗೋಮಾತೆಯನ್ನು ಇಡೀ ವಿಶ್ವದ ತಾಯಿಯಾಗಿ ಗೌರವಿಸಿ ಪೂಜಿಸುವ ಪರಂಪರೆ ನಮ್ಮದಾಗಿದೆ. ಮುಕ್ಕೋಟಿ ದೇವತೆಗಳ ಆವಾಸಸ್ಥಾನವೆಂದು ಪರಿಗಣಿಸಲ್ಪಡುವ ಗೋಮಾತೆಯ ಸೇವೆ ಮತ್ತು ಆರಾಧನೆಗೆ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಮಹತ್ವವಿದೆ. ಕಲಿಯುಗದಲ್ಲಿ ಮಾನವನ ಪಾಪಕರ್ಮಗಳ ಪರಿಹಾರಕ್ಕೆ ಗೋಸೇವೆಯೇ ಶ್ರೇಷ್ಠ ಮಾರ್ಗವೆಂಬ ನಂಬಿಕೆಯಿದೆ. ಗೋಮಾತೆಯ ನಿತ್ಯ ದರ್ಶನವೇ ಪುಣ್ಯದಾಯಕವಾಗಿದ್ದು, ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಇಂತಹ ಪುಣ್ಯಕಾರ್ಯಕ್ಕೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ಈ ಕಾರ್ಯವು ನಿರಂತರವಾಗಿ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.

ಬಾಂಡ್ಯ ಎಜುಕೇಶನ್ ಟ್ರಸ್ಟ್‌ನ ಜಂಟಿ ಕಾರ್ಯನಿರ್ವಾಹಕರಾದ ಕೆ. ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮಾ ಎಸ್. ಶೆಟ್ಟಿ ಅವರು ಗೋಪೂಜೆಯಲ್ಲಿ ಪಾಲ್ಗೊಂಡರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ಅವರು ಪುಷ್ಪ ನೀಡಿ ಅತಿಥಿಗಳನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಸರ್ವ ಸದಸ್ಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಕುಮಾರಿ ಅರ್ಚನಾ ಪ್ರಾರ್ಥಿಸಿದರು. ಡಾ. ಕೃಷ್ಣರಾಜ ಕರಬ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.