


ಡೈಲಿವಾರ್ತೆ: 10/ನ./2026




ಮಣಿಪಾಲ: ರಾಷ್ಟ್ರೀಯ ಹೆದ್ದಾರಿಯಲ್ಲೇ ಯುವಕರ ನಡುವೆ ಹೊಡೆದಾಟ

ಮಣಿಪಾಲ: ರಾಷ್ಟ್ರೀಯ ಹೆದ್ದಾರಿ 169(A)ರ ಈಶ್ವರನಗರದ ಎಪಿಕೋಡ್ ಸೆಂಟರ್ ಎದುರು ಸಾರ್ವಜನಿಕ ಸ್ಥಳದಲ್ಲಿ ಯುವಕರ ಗುಂಪೊಂದು ಪರಸ್ಪರ ಹೊಡೆದಾಡಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆಗೆ ಸಂಬಂಧಿಸಿ ಮಣಿಪಾಲ ಪೊಲೀಸರು 11 ಮಂದಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನ.8ರಂದು ಯುವಕರ ಗುಂಪೊಂದು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಗುಂಪು ಕಟ್ಟಿಕೊಂಡು ಪರಸ್ಪರ ಹೊಡೆದಾಡುತ್ತಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಂ ಮತ್ತು ವಾಟ್ಸ್ಆ್ಯಪ್ಗಳಲ್ಲಿ ಹರಿದಾಡಿದ್ದವು. ಮಣಿಪಾಲ ಪೊಲೀಸ್ ಠಾಣೆಯ ಸಿಬ್ಬಂದಿ ಸಿದ್ದೇಶಿ ಜಿ.ಆರ್. ಅವರು ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಈ ದೃಶ್ಯಾವಳಿಗಳನ್ನು ಗಮನಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಬಳಿಕ ದೃಶ್ಯಾವಳಿಗಳಲ್ಲಿದ್ದ ವ್ಯಕ್ತಿಗಳ ಗುರುತು ಪತ್ತೆಗಾಗಿ ಸಾರ್ವಜನಿಕರು ಹಾಗೂ ಮಾಹಿತಿದಾರರಿಂದ ಮಾಹಿತಿ ಸಂಗ್ರಹಿಸಿದಾಗ, ಯಾವುದೋ ಕಾರಣಕ್ಕೆ ಯುವಕರ ಗುಂಪಿನ ನಡುವೆ ಪರಸ್ಪರ ಘರ್ಷಣೆ ನಡೆದಿರುವುದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಆರ್ಷ್ ಅಮಿತ್ ಶಂಕರ್, ಉತ್ಕರ್ಷ್, ವಿನಾಯಕ ಭಾರದ್ವಾಜ್, ವೇದಾಂತ್ ಶಂಕರ್, ಚೇತನ್, ಅಕ್ಷತ್ ಸಿಂಗ್, ಲಿನ್ ಪೊರ್ಡ್ ಲೆನಾಕ್ಸ್, ಅನುರಾಗ್ ಮುಖರ್ಜಿ, ಶುಭಂ ನಂದಿ, ಅರ್ಜುನ್ ಶಾ ಹಾಗೂ ಪ್ರಜ್ವಲ್ ಸೇರಿದಂತೆ ಇತರರು ಭಾಗಿಯಾಗಿರುವುದಾಗಿ ಗುರುತಿಸಲಾಗಿದೆ.
ಆರೋಪಿತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಗುಂಪು ಸೇರಿ ಪರಸ್ಪರ ಹೊಡೆದಾಡಿಕೊಂಡಿದ್ದಲ್ಲದೆ, ರಸ್ತೆಯಲ್ಲಿ ಬೈಕ್ಗಳನ್ನು ನಿಲ್ಲಿಸಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟಾಗಿ, ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸಿದ ಆರೋಪದ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 183/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 194(2) ಮತ್ತು 292ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

