ಡೈಲಿವಾರ್ತೆ: 12/ನ./2026

ಕುಂದಾಪುರ: ಬೈಕ್ ಅಡ್ಡಗಟ್ಟಿ ಸವಾರನ ಮೇಲೆ ಹಲ್ಲೆ, ಜೀವ ಬೆದರಿಕೆ – ನಾಗರಾಜ್ ಖಾರ್ವಿ ವಿರುದ್ಧ ಪ್ರಕರಣ ದಾಖಲು

ಕುಂದಾಪುರ: ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿ, ಕೆನ್ನೆಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಘಟನೆ ಕುಂದಾಪುರದ ಕೋಡಿ ಲೈಟ್‌ಹೌಸ್‌ ಸಮೀಪ ನ.10ರ ರಾತ್ರಿ ನಡೆದಿದೆ.

ಕೋಡಿ ಗ್ರಾಮದ ಹರಿ ಭಜನಾ ಮಂದಿರದ ಬಳಿಯ ನಿವಾಸಿ ಸುನೀಲ್ (35) ಹಲ್ಲೆಗೊಳಗಾದವರು. ಇವರು ನ.10ರಂದು ರಾತ್ರಿ 10:45ರ ಸುಮಾರಿಗೆ ಹಳೆಅಳಿವೆಯಿಂದ ಕೋಡಿಯಲ್ಲಿರುವ ತಮ್ಮ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಕೋಡಿ ಲೈಟ್‌ಹೌಸ್‌ ಬಳಿ ಎದುರಿನಿಂದ ಬಂದ ಪರಿಚಿತ ನಾಗರಾಜ್ ಖಾರ್ವಿ ಎಂಬಾತ KA 20 HF 1692 ಸಂಖ್ಯೆಯ ಬೈಕ್‌ನಲ್ಲಿ ಅಡ್ಡಾದಿಡ್ಡಿಯಾಗಿ (ಝಿಗ್‌ಝಾಗ್) ಚಲಾಯಿಸಿಕೊಂಡು ಬಂದು ಸುನೀಲ್ ಅವರ ಬಳಿ ಬೈಕ್ ನಿಲ್ಲಿಸಿದ್ದಾನೆ.

ಈ ವೇಳೆ ನಾಗರಾಜ್‌ನ ಬೈಕ್ ಚಾಲನೆಯ ಬಗ್ಗೆ ಸುನೀಲ್ ಪ್ರಶ್ನಿಸಿದ್ದು, ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಸುನೀಲ್ ಬೈಕ್ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ತೆರಳಲು ಮುಂದಾದಾಗ ನಾಗರಾಜ್ ಅಡ್ಡಗಟ್ಟಿ ತಡೆದಿದ್ದಾನೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೆನ್ನೆಗೆ ಕೈಯಿಂದ ಹೊಡೆದು, ತನ್ನ ವಿಚಾರಕ್ಕೆ ಬಂದರೆ ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಸುಮಾರು ಒಂದು ತಿಂಗಳ ಹಿಂದೆ ಸುನೀಲ್ ಅವರ ತಂದೆಗೆ ನಾಗರಾಜ್ ತೊಂದರೆ ನೀಡಿದ್ದ ವಿಚಾರವನ್ನು ಸುನೀಲ್ ಪ್ರಶ್ನಿಸಿದ್ದೇ ಹಲ್ಲೆ ಮತ್ತು ಬೆದರಿಕೆಗೆ ಕಾರಣವೆಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂಬಂಧ ಸುನೀಲ್ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಕ್ರ. 98/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 126(2), 115(2), 352 ಹಾಗೂ 351(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.