


ಡೈಲಿವಾರ್ತೆ: 12/ನ./2026




ಪ್ರಾಮಾಣಿಕ ಸೇವೆ ಸಲ್ಲಿಸಿದ ಐರೋಡಿ ಗ್ರಾಮ ಆಡಳಿತಾಧಿಕಾರಿ ಚಲುವರಾಜ್ಗೆ ಗೌರವ ಸನ್ಮಾನ

ಕೋಟ: ಗ್ರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಚಲುವರಾಜ್ ಅವರು ತೋರಿದ ಪ್ರಾಮಾಣಿಕತೆ, ಬದ್ಧತೆ ಹಾಗೂ ಜನಸ್ನೇಹಿ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಐರೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಐರೋಡಿ ವಿಠ್ಠಲ್ ಪೂಜಾರಿ ಹೇಳಿದರು.
ಐರೋಡಿ ಮತ್ತು ಬಾಳ್ಕುದ್ರು ಗ್ರಾಮಗಳ ಗ್ರಾಮ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿದ ಚಲುವರಾಜ್ ಅವರನ್ನು ಐರೋಡಿ ಗ್ರಾಮ ಪಂಚಾಯತ್ ವತಿಯಿಂದ ಇತ್ತೀಚೆಗೆ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಠ್ಠಲ್ ಪೂಜಾರಿ, ಗ್ರಾಮ ಆಡಳಿತ ವ್ಯವಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವುದು ಹಲವು ಸವಾಲುಗಳಿಂದ ಕೂಡಿದೆ. ದಿನನಿತ್ಯ ಜನಸಾಮಾನ್ಯರ ವಿವಿಧ ಸಮಸ್ಯೆಗಳನ್ನು ಎದುರಿಸುವ ಜವಾಬ್ದಾರಿಯ ನಡುವೆ, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಜನಪರವಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಚಲುವರಾಜ್ ಅವರದ್ದಾಗಿದೆ. ಅವರ ಸೇವಾ ಅವಧಿಯ ಕಾರ್ಯವೈಖರಿ ಹಾಗೂ ಕರ್ತವ್ಯನಿಷ್ಠೆ ಇತರರಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಐರೋಡಿ ಗ್ರಾಮ ಪಂಚಾಯತ್ ಹಾಗೂ ಗ್ರಾಮಸ್ಥರ ಪರವಾಗಿ ಚಲುವರಾಜ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ಸೂರಜ್ ಕುಮಾರ್, ಪಂಚಾಯತ್ ಮಾಜಿ ಅಧ್ಯಕ್ಷ ವಾಸುದೇವ ಕೋಟ್ಯಾನ್, ನಿಕಟಪೂರ್ವ ಸದಸ್ಯರಾದ ಶಿವರಾಮ್ ಶ್ರೀಯಾನ್ ಮತ್ತು ಶೇಖರ ಪೂಜಾರಿ, ಗ್ರಾಮ ಸಹಾಯಕ ನರಸಿಂಹ ಪೂಜಾರಿ, ಸ್ಥಳೀಯರಾದ ಶಂಕರ ಕುಲಾಲ್, ಸುರೇಶ ಕುಂದರ್, ಸಂಜೀವ ಪೂಜಾರಿ, ಅರವಿಂದ ಹೆಬ್ಬಾರ್, ಮಂಜುನಾಥ ಬಾಳ್ಕುದ್ರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಭಾಗೀರಥಿ, ಶಿಕ್ಷಣ ಸಂಯೋಜಕಿ ಅನ್ನಪೂರ್ಣೇಶ್ವರಿ, ಎಸ್ಡಿಎ ಶೇಖರ, ತೋಟಗಾರಿಕೆ ಇಲಾಖೆಯ ಅಧಿಕಾರಿ ಪವಿತ್ರ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು

