ಡೈಲಿವಾರ್ತೆ: 12/ನ./2026

ಮಕ್ಕಳಾಗದ ವಿಚಾರ ಮುಂದಿಟ್ಟು ಪತ್ನಿಗೆ ಕಿರುಕುಳ: ಪತಿಯ ಎದೆಗೆ ಚಾಕುವಿನಿಂದ ಇರಿದು ಹತ್ಯೆ!

ಬೆಂಗಳೂರು: ಮಕ್ಕಳಾಗದ ವಿಚಾರವನ್ನು ಮುಂದಿಟ್ಟುಕೊಂಡು ಪತ್ನಿಯೊಂದಿಗೆ ನಿರಂತರವಾಗಿ ಜಗಳವಾಡಿ ಕಿರುಕುಳ ನೀಡುತ್ತಿದ್ದ ಪತಿಯನ್ನು ಪತ್ನಿಯೇ ಅಡುಗೆ ಮನೆಯ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ನಗರದ ಲಕ್ಷ್ಮೀಪುರದಲ್ಲಿ ನಡೆದಿದೆ.

ಕೊಲೆಯಾದ ವ್ಯಕ್ತಿಯನ್ನು ರಾಜಶೇಖರ್ (44) ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಮಾಲಾಶ್ರೀ (35) ಕೊಲೆ ಆರೋಪಿಯಾಗಿದ್ದಾಳೆ.

ರಾಜಶೇಖರ್ ಖಾಸಗಿ ಬ್ಯಾಂಕಿನ ಸಾಲ ವಿಭಾಗದಲ್ಲಿ ಉದ್ಯೋಗಿಯಾಗಿದ್ದರು. ದಂಪತಿಗೆ ಮಕ್ಕಳಾಗಿರಲಿಲ್ಲ ಎನ್ನಲಾಗಿದ್ದು, ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಮನಸ್ತಾಪ ಹಾಗೂ ಜಗಳ ನಡೆಯುತ್ತಿತ್ತು. ಹಗಲಿನಲ್ಲಿ ಪತ್ನಿಯೊಂದಿಗೆ ಪ್ರೀತಿಯಿಂದ ವರ್ತಿಸುತ್ತಿದ್ದ ರಾಜಶೇಖರ್, ರಾತ್ರಿ ಮದ್ಯಪಾನ ಮಾಡಿ ಮನೆಗೆ ಬಂದ ಬಳಿಕ ಜಗಳವಾಡಿ ಹಲ್ಲೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ. ಈ ಮೂಲಕ ಪತ್ನಿಗೆ ನಿರಂತರ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಆರೋಪವೂ ಕೇಳಿಬಂದಿದೆ.

ನ.11ರ ರಾತ್ರಿ ಕೂಡ ರಾಜಶೇಖರ್ ಮದ್ಯಪಾನ ಮಾಡಿ ಮನೆಗೆ ಬಂದಿದ್ದು, ಮಕ್ಕಳಾಗದ ವಿಚಾರವನ್ನು ಮುಂದಿಟ್ಟುಕೊಂಡು ಪತ್ನಿಯೊಂದಿಗೆ ಮತ್ತೆ ಜಗಳ ಆರಂಭಿಸಿದ್ದಾನೆ. ಈ ವೇಳೆ ದಂಪತಿ ನಡುವಿನ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದೆ. ಇದರಿಂದ ಆಕ್ರೋಶಗೊಂಡ ಮಾಲಾಶ್ರೀ ಮನೆಯ ಅಡುಗೆ ಕೋಣೆಯಲ್ಲಿದ್ದ ಚಾಕುವಿನಿಂದ ಪತಿಯ ಎದೆಗೆ ಇರಿದಿದ್ದಾಳೆ ಎನ್ನಲಾಗಿದೆ.

ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ರಾಜಶೇಖರ್ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದು, ಬಳಿಕ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮಾಲಾಶ್ರೀಯನ್ನು ವಿಚಾರಣೆಗೊಳಪಡಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ದಂಪತಿ ನಡುವಿನ ಕೌಟುಂಬಿಕ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪತಿ ಪ್ರಾಣ ಕಳೆದುಕೊಂಡರೆ, ಕೊಲೆ ಆರೋಪದಲ್ಲಿ ಪತ್ನಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾಳೆ.