ಡೈಲಿವಾರ್ತೆ: 12/ನ./2026

ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ನಿಲ್ಲಿಸಿ ಎಂಬ ಘೋಷಣೆಯೊಂದಿಗೆ ಬಿಜೆಪಿ ಪ್ರತಿಭಟನೆಗೆ ಇಳಿದಿರುವುದು ಹಾಸ್ಯಾಸ್ಪದ – ರಮಾನಾಥ ರೈ

ಬಂಟ್ವಾಳ : ಕಳೆದ 12 ವರ್ಷಗಳ ಅವಧಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಮಾಡಿರುವ ಬೆಲೆ ಏರಿಕೆ ಸಹಿತ ಹಲವು ಅಧಿಕಾರ ವೈಫಲ್ಯಗಳನ್ನು ಬಿಚ್ಚಿಟ್ಟ
ಬಿಜೆಪಿಗರು ಇದೀಗ ತಾವೇ ಅಧಿಕಾರದಲ್ಲಿದ್ದರೂ ಪ್ರಜಾಪ್ರಭುತ್ವ ಉಳಿಸಿ ಅರಾಜಕತೆ ನಿಲ್ಲಿಸಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆಗೆ ಇಳಿದಿರುವುದು ಹಾಸ್ಯಾಸ್ಪದ ಎಂದು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಬಣ್ಣಿಸಿದರು.

ಬಿ ಸಿ ರೋಡಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷಗಳಿಂದ ತೈಲ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಹಾಗೂ ರಾಜ್ಯಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ಜಿ‌ಎಸ್.ಟಿ ಪಾಲು ನೀಡದಿರುವುದರಿಂದ ಆಗಿರುವ ಪರಿಣಾಮವೇ ರಾಜ್ಯದಲ್ಲಿ ಪ್ರತಿಫಲನಗೊಂಡಿದೆ ಎಂಬುದನ್ನು ಜನ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದವರು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಕ್ರಮಬದ್ಧವಾಗಿ ಹಾಲಿನ ದರದಲ್ಲಿ ಏರಿಕೆ ಮಾಡಿದೆಯೇ ಹೊರತು ಜನರ ಹಿತ ಬಲಿಕೊಟ್ಟು ಶ್ರೀಮಂತರ ಹಿತ ಕಾಯುವ ಕೆಲಸವನ್ನು ಕಾಂಗ್ರೆಸ್ ಯಾವತ್ತೂ ಮಾಡಿಲ್ಲ ಎಂದ ಅವರು ಕೇಂದ್ರದ ಬಿಜೆಪಿ ಸರ್ಕಾರ ಪೆಟ್ರೋಲಿನಲ್ಲಿ ಎಥೆನಾಲ್ ಅಂಶವನ್ನು ಗಣನೀಯ ಪ್ರಮಾಣದಲ್ಲಿ ಸೇರಿಸಿ ಜನರ ಮೇಲೆ ಬರೆ ಎಳೆದು ಎಥೆನಾಲ್ ಕಂಪೆನಿಯ ಹಿತ ಮಾತ್ರ ಬಯಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರ್ಕಾರ ಮಾಡಿರುವ ಬೆಲೆ ಏರಿಕೆ ಬಗ್ಗೆ ನೆನೆಸಿಕೊಂಡರೆ ಸಹಿಸಲಸಾಧ್ಯವಾದ ನೋವು ಜನರಿಗಾಗಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್, ರೈತರ ಕೀಟ ನಾಶಕ, ಗೊಬ್ಬರ ಮೊದಲಾದ ಬೆಲೆ ಏರಿಕೆಗಳ ಬಗ್ಗೆ ಬಿಜೆಪಿ ಪ್ರತಿಭಟನೆ ನಡೆಸಲಿ ಎಂದು ಸವಾಲು ಹಾಕಿದ ರಮಾನಾಥ ರೈ ಅವರು, ಇಂಧನ ಬೆಲೆ ಏರಿಕೆ ಆದಾಗ ಬಸ್ಸು ದರ ಏರಿಕೆ ಅನಿವಾರ್ಯ ಎಂಬುದು ಬಿಜೆಪಿಗರಿಗೆ ಚೆನ್ನಾಗಿ ಗೊತ್ತಿದೆ. ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದ್ದರೂ ರಾಜ್ಯಕ್ಕೆ ದಕ್ಕುವ ತೆರಿಗೆ ಪಾಲು ಕೇಂದ್ರ ಸರ್ಕಾರ ನೀಡುತ್ತಲೇ ಇಲ್ಲ ಎಂಬುದೂ ಬಿಜೆಪಿಗರಿಗೆ ಗೊತ್ತು. ಆದರೂ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಲು ಹಿಂಜರಿಯುವ ಬಿಜೆಪಿಗರು ವೈಫಲ್ಯ ಮರೆಮಾಚಲು ನಾಟಕ ಆಡುತ್ತಿದ್ದಾರೆ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ ಎಂದವರು ಕಟಕಿಯಾಡಿದರು.

ದೇಶಕ್ಕಾಗಿ ದೊಡ್ಡ ತ್ಯಾಗ ಮಾಡಿರುವ ನೆಹರೂ ಕುಟುಂಬದ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿಗರು ಅರಾಜಕತೆ ಆರೋಪ ಮಾಡುವುದು ಅತ್ಯಂತ ಖಂಡನೀಯ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಸಚಿವರು, ಇಂದಿರಾ ಗಾಂಧಿ ಸಹಿತ ಕಾಂಗ್ರೆಸ್ ಸರ್ಕಾರಗಳು ದೇಶದ ಬಡಜನರ ಹಿತಕ್ಕಾಗಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಭೂಸುಧಾರಣೆ ಕಾನೂನಾಗಲೀ, ಬಿಪಿಎಲ್ ಪಡಿತರ ಚೀಟಿಯಾಗಲೀ, ಅನ್ನಭಾಗ್ಯ ಯೋಜನೆಯಾಗಲೀ, ಸಿದ್ದರಾಮಯ್ಯ ಅವಧಿಯಲ್ಲಿ ಹಲವು ನಿಗಮಗಳ ಕೋಟ್ಯಂತರ ರೂಪಾಯಿ ಸಾಲಮನ್ನಾ ಮಾಡಿರುವುದಾಗಲೀ, ಗ್ಯಾರಂಟಿ ಯೋಜನೆಗಳಾಗಲೀ ಇದೆಲ್ಲವೂ ಕಾಂಗ್ರೆಸ್ ಬಡ ಜನರಿಗೆ ಮಾಡಿರುವ ಮಹತ್ವದ ಯೋಜನೆಗಳಾಗಿದ್ದು, ಬಿಜೆಪಿ ಸರ್ಕಾರ ಕಾಂಗ್ರೆಸ್ ಮಾಡಿರುವುದನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದು ಬಿಟ್ಟರೆ ಬಡ ಜನರಿಗೆ ಉಪಕಾರ ಮಾಡಿರುವುದು ಯಾವುದೂ ಇಲ್ಲ. ವಿಮಾನ ನಿಲ್ದಾಣಗಳನ್ನು ಕೂಡಾ ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಬಿಜೆಪಿ ಸರ್ಕಾರಗಳು ಉಳ್ಳವರ, ಕಾರ್ಪೊರೇಟ್ ಮಂದಿಯ ಹಿತ ಕಾಪಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ಘೂಡಿಸಿದರು.

ಈ ಸಂದರ್ಭ ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಬಿ ಎಂ ಅಬ್ಬಾಸ್ ಅಲಿ, ಐಡಾ ಸುರೇಶ್, ಅಬೂಬಕ್ಕರ್ ಸಿದ್ದೀಕ್, ಸಂಪತ್ ಕುಮಾರ್ ಶೆಟ್ಟಿ, ಜಯಂತಿ ಪೂಜಾರಿ, ಇಬ್ರಾಹಿಂ ನವಾಝ್, ಲವೀನಾ ಮೊರಾಸ್, ನಿರಂಜನ್ ರೈ, ಕುಶಲ ಎಂ.ಪೆರಾಜೆ, ಮೋಹನ್ ಚೆಂಡ್ತಿಮಾರು ಮೊದಲಾದವರು ಜೊತೆಗಿದ್ದರು.