


ಡೈಲಿವಾರ್ತೆ: 13/ನ./2026




ಜಮೀನು ಲೀಸ್ ವಿವಾದದ ಸಂಘರ್ಷಕ್ಕೆ ಇಬ್ಬರ ಬಲಿ – ತಡಲಗಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಮಾರಕ ಘರ್ಷಣೆ; ನಾಲ್ವರಿಗೆ ಗಾಯ

ವಿಜಯಪುರ: ಜಮೀನು ಲೀಸ್ಗೆ ಪಡೆದ ವಿಚಾರವಾಗಿ ಎರಡು ಗುಂಪುಗಳ ನಡುವೆ ಉಂಟಾದ ವಿವಾದ ವಿಕೋಪಕ್ಕೆ ತಿರುಗಿ ಮಾರಕ ಘರ್ಷಣೆಯಲ್ಲಿ ಅಂತ್ಯಗೊಂಡ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ಶುಕ್ರವಾರ (ನ.13) ನಡೆದಿದೆ. ಕಲ್ಲು, ಕಟ್ಟಿಗೆ ಹಾಗೂ ಬೊಂಬುಗಳಿಂದ ನಡೆದ ಹಲ್ಲೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಡಲಗಿ ಗ್ರಾಮದ ಹನುಮವ್ವ ಮೇಟಿ ಅವರಿಗೆ ಸೇರಿದ ಜಮೀನನ್ನು ಸಾಲೋಟಗಿ ಕುಟುಂಬದವರು ಲೀಸ್ಗೆ ಪಡೆದು ಸುಮಾರು 10 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದರು ಎನ್ನಲಾಗಿದೆ. ಆದರೆ, ಸದರಿ ಜಮೀನಿನಲ್ಲಿ ತಮ್ಮ ಪಾಲಿದೆ ಎಂದು ಹನುಮವ್ವ ಅವರ ಸಂಬಂಧಿಕರು ಆಕ್ಷೇಪ ವ್ಯಕ್ತಪಡಿಸಿ, ಕಬ್ಬು ಕಟಾವು ಮಾಡಲು ವಿರೋಧಿಸುತ್ತಿದ್ದರು ಎನ್ನಲಾಗಿದೆ.
ಶುಕ್ರವಾರ ಜಮೀನಿನಲ್ಲಿ ಕಬ್ಬು ಕಟಾವು ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಲೀಸ್ದಾರರಾದ ಸಾಲೋಟಗಿ ಕುಟುಂಬದವರು ಹಾಗೂ ಹನುಮವ್ವ ಅವರ ಸಂಬಂಧಿಕರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ವಾಗ್ವಾದ ತೀವ್ರಗೊಂಡು ಎರಡೂ ಗುಂಪುಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ಪರಿಸ್ಥಿತಿ ಕೈಮೀರಿ ಕಲ್ಲು, ಕಟ್ಟಿಗೆ ಹಾಗೂ ಬೊಂಬುಗಳಿಂದ ಪರಸ್ಪರ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಘರ್ಷಣೆಯಲ್ಲಿ ಹನುಮಂತ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕೊಲ್ಹಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಪೊಲೀಸ್ ತನಿಖೆಯ ಬಳಿಕ ಘರ್ಷಣೆಯ ಸಂಪೂರ್ಣ ಹಿನ್ನೆಲೆ ಹಾಗೂ ಇತರ ವಿವರಗಳು ತಿಳಿದುಬರಬೇಕಿದೆ.

