ಡೈಲಿವಾರ್ತೆ: 12/ನ./2026

ಸೌಜನ್ಯಾ ಪ್ರಕರಣ: ಸಂತೋಷ್ ರಾವ್ ತಪಾಸಣೆ ನಡೆಸಿದ್ದ ಡಾ.ಮಹಾಬಲ ಶೆಟ್ಟಿ ಸೇರಿ ಹಲವರ ವಿಚಾರಣೆ

ಮಂಗಳೂರು, ನ.12: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ಎಸ್‌ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದು, ಈ ಹಿಂದೆ ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್‌ಗೆ ವೈದ್ಯಕೀಯ ತಪಾಸಣೆ ನಡೆಸಿದ್ದ ಫಾರೆನ್ಸಿಕ್ ತಜ್ಞ ಡಾ. ಮಹಾಬಲ ಶೆಟ್ಟಿ ಅವರನ್ನು ಕರೆಸಿ ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ನ.12ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಮಂಗಳೂರಿನಲ್ಲಿರುವ ಎಸ್‌ಐಟಿ ಕಚೇರಿಗೆ ಆಗಮಿಸಿದ ಡಾ. ಮಹಾಬಲ ಶೆಟ್ಟಿ ಅವರನ್ನು ಅಧಿಕಾರಿಗಳು ಸಂಜೆಯವರೆಗೂ ವಿಚಾರಣೆಗೊಳಪಡಿಸಿದರು. ಸಂತೋಷ್ ರಾವ್ ಅವರ ಆರೋಗ್ಯ ಸ್ಥಿತಿ, ವೈದ್ಯಕೀಯ ಪರೀಕ್ಷೆ ಹಾಗೂ ಈ ಹಿಂದೆ ಸಲ್ಲಿಸಲಾಗಿದ್ದ ವೈದ್ಯಕೀಯ ವರದಿಗಳಿಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಕೇಳಿರುವುದಾಗಿ ತಿಳಿದುಬಂದಿದೆ.

ಸೌಜನ್ಯಾ ಪ್ರಕರಣದಲ್ಲಿ ಧರ್ಮಸ್ಥಳದ ಪರಿಸರದಲ್ಲಿ ಅಲೆದಾಡುತ್ತಿದ್ದ ಸಂತೋಷ್ ರಾವ್ ಅವರನ್ನು ಸ್ಥಳೀಯ ಕೆಲಸಗಾರರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಬಳಿಕ ಪೊಲೀಸರು ಅವರನ್ನು ಪ್ರಕರಣದ ಆರೋಪಿಯನ್ನಾಗಿ ಗುರುತಿಸಿದ್ದರು. ಈ ಸಂದರ್ಭದಲ್ಲಿ ಸಂತೋಷ್ ರಾವ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಹಾಗೂ ಅವರಿಗೆ ಜನನಾಂಗದ ಉದ್ರೇಕಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿತ್ತು ಎಂಬ ಅಂಶಗಳು ವೈದ್ಯಕೀಯ ವರದಿಯಲ್ಲಿ ಉಲ್ಲೇಖವಾಗಿದ್ದವು. ಈ ವಿಚಾರಗಳು ಪ್ರಕರಣದ ವಿಚಾರಣೆ ವೇಳೆ ಸಿಬಿಐ ನ್ಯಾಯಾಲಯದಲ್ಲಿಯೂ ಪ್ರಸ್ತಾಪವಾಗಿದ್ದವು.
ನಂತರ ನ್ಯಾಯಾಲಯವು ಸಂತೋಷ್ ರಾವ್ ಅವರನ್ನು ನಿರಪರಾಧಿ ಎಂದು ತೀರ್ಪು ನೀಡಿತ್ತು. ಈ ಬೆಳವಣಿಗೆಯ ಬಳಿಕ ಪ್ರಕರಣದ ನೈಜ ಆರೋಪಿಯನ್ನು ಪತ್ತೆಹಚ್ಚುವ ಉದ್ದೇಶದಿಂದ ಮರುತನಿಖೆ ಆರಂಭಿಸಲಾಗಿದೆ. ಇದೀಗ ಹಿಂದಿನ ತನಿಖೆಯ ವೇಳೆ ಸಂಗ್ರಹಿಸಲಾದ ವೈದ್ಯಕೀಯ ದಾಖಲೆಗಳು, ತಜ್ಞರ ವರದಿಗಳು ಹಾಗೂ ಸಾಕ್ಷ್ಯಗಳ ಕುರಿತು ಎಸ್‌ಐಟಿ ಮರುಪರಿಶೀಲನೆ ನಡೆಸುತ್ತಿದೆ.
ವಿಚಾರಣೆ ಮುಗಿಸಿ ಹೊರಬಂದ ಡಾ. ಮಹಾಬಲ ಶೆಟ್ಟಿ ಅವರನ್ನು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ, ತಮ್ಮನ್ನು ವಿಚಾರಣೆಗೆ ಕರೆಸಿರುವ ಉದ್ದೇಶದ ಬಗ್ಗೆ ಅಧಿಕಾರಿಗಳನ್ನೇ ಕೇಳುವಂತೆ ಪ್ರತಿಕ್ರಿಯಿಸಿದರು. ಸಂತೋಷ್ ರಾವ್ ಅವರನ್ನು ಮತ್ತೆ ವಿಚಾರಣೆ ನಡೆಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆಯಲ್ಲವೇ ಎಂಬ ಪ್ರಶ್ನೆಗೆ, ಆ ವಿಚಾರಗಳೆಲ್ಲ ನ್ಯಾಯಾಲಯದಲ್ಲಿ ಮುಗಿದಿವೆ. ಮತ್ತೆ ಸಂತೋಷ್ ರಾವ್ ಅವರ ವಿಚಾರವೇಕೆ ಎಂದು ಪ್ರಶ್ನಿಸಿದರು.

ಇದೇ ವೇಳೆ, ಸೌಜನ್ಯಾ ಅವರ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸಿದ್ದ ಅನಿಲ್ ಎಂಬ ವಾರ್ಡ್ ಬಾಯ್ ಅವರನ್ನೂ ಎಸ್‌ಐಟಿ ಅಧಿಕಾರಿಗಳು ಕರೆಸಿ ವಿಚಾರಣೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸೌಜನ್ಯಾ ಅವರ ಹೊಟ್ಟೆಯಲ್ಲಿ ಕೆಲವೇ ಗಂಟೆಗಳ ಹಿಂದೆ ಸೇವಿಸಿದ್ದ ಅನ್ನದ ಅಂಶ ಪತ್ತೆಯಾಗಿತ್ತು ಎನ್ನಲಾಗಿದ್ದು, ಆಕೆಗೆ ಘಟನೆಗೂ ಮುನ್ನ ಯಾರಾದರೂ ಅನ್ನ ತಿನ್ನಿಸಿದ್ದರೇ ಎಂಬ ಅನುಮಾನವೂ ಈ ಹಿಂದೆ ವ್ಯಕ್ತವಾಗಿತ್ತು. ಅಲ್ಲದೆ, ಮೃತದೇಹದ ಗುಪ್ತಾಂಗ ಸೇರಿದಂತೆ ದೇಹದ ಕೆಲವು ಭಾಗಗಳಲ್ಲಿ ಪರಚಿದ ಗಾಯದ ಗುರುತುಗಳಿದ್ದವು ಎಂಬ ಅಂಶಗಳೂ ವರದಿಯಲ್ಲಿ ಉಲ್ಲೇಖವಾಗಿದ್ದವು. ಈ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದ ವಿವರಗಳ ಕುರಿತು ಅನಿಲ್ ಅವರನ್ನು ಪ್ರಶ್ನಿಸಿ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.

ಸಂತೋಷ್ ರಾವ್ ಅವರ ದೇಹದ ಮೇಲಿದ್ದ ಗಾಯಗಳು ಹಾಗೂ ಅವರಿಗೆ ಜನನಾಂಗದ ಉದ್ರೇಕಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿದ್ದುದರ ಬಗ್ಗೆ ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ವೈದ್ಯಕೀಯ ಅಂಶಗಳ ಆಧಾರದಲ್ಲಿ ಅತ್ಯಾಚಾರ ಆರೋಪದ ಕುರಿತಂತೆ ನ್ಯಾಯಾಲಯದಲ್ಲಿ ಪ್ರಶ್ನೆಗಳು ಎದುರಾಗಿದ್ದವು. ಆದರೆ, ಈ ಕುರಿತು ತನಿಖಾಧಿಕಾರಿಗಳು ಸಮರ್ಪಕ ಉತ್ತರ ನೀಡಲು ಸಾಧ್ಯವಾಗಿರಲಿಲ್ಲ ಎಂಬ ವಿಚಾರವೂ ಈ ಹಿಂದೆ ಚರ್ಚೆಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ತಜ್ಞರು ಹಾಗೂ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದವರಿಂದ ಮತ್ತೊಮ್ಮೆ ಮಾಹಿತಿ ಪಡೆಯುವ ಮೂಲಕ ಹಿಂದಿನ ವರದಿಗಳಲ್ಲಿನ ಅಂಶಗಳನ್ನು ಎಸ್‌ಐಟಿ ಪರಿಶೀಲಿಸುತ್ತಿದೆ. ಈ ಹಿಂದೆ ದಾಖಲಾದ ವೈದ್ಯಕೀಯ ಅಭಿಪ್ರಾಯಗಳು ಮತ್ತು ಪ್ರಕರಣದ ಇತರ ಸಾಕ್ಷ್ಯಗಳ ನಡುವಿನ ಅಂಶಗಳನ್ನು ಸ್ಪಷ್ಟಪಡಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಇದರೊಂದಿಗೆ ಸೌಜನ್ಯಾ ಅವರ ತಾಯಿ ಕುಸುಮಾವತಿ ಅವರನ್ನೂ ಮಂಗಳೂರಿನ ಎಸ್‌ಐಟಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದವರಿಗಿರುವ ಅನುಮಾನಗಳು, ಹಿಂದಿನ ತನಿಖೆಯಲ್ಲಿನ ಲೋಪಗಳ ಕುರಿತು ಅವರಿಂದ ಮಾಹಿತಿ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.

ಒಟ್ಟಾರೆ, ಸೌಜನ್ಯಾ ಪ್ರಕರಣದ ಮರುತನಿಖೆಯ ಭಾಗವಾಗಿ ಹಿಂದಿನ ವೈದ್ಯಕೀಯ ವರದಿಗಳು, ಮರಣೋತ್ತರ ಪರೀಕ್ಷೆಯ ವಿವರಗಳು ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳನ್ನು ಎಸ್‌ಐಟಿ ಮರುಪರಿಶೀಲಿಸುತ್ತಿದ್ದು, ಮುಂದಿನ ತನಿಖೆಯ ಬೆಳವಣಿಗೆಗಳು ಕುತೂಹಲ ಮೂಡಿಸಿವೆ.