ಡೈಲಿವಾರ್ತೆ: 13/ನ./2026

ಬೈಂದೂರು: ಪಟಾಕಿ ಅಂಗಡಿ ತೆರೆಯುತ್ತಿದ್ದ ಯುವಕನಿಗೆ ಅಡ್ಡಿಪಡಿಸಿ ಹಲ್ಲೆ – 11 ಮಂದಿ ವಿರುದ್ಧ ಪ್ರಕರಣ ದಾಖಲು

ಬೈಂದೂರು: ಶಿರೂರಿನ ಗಾಂಧಿ ಮೈದಾನದಲ್ಲಿ ಪಟಾಕಿ ಅಂಗಡಿ ತೆರೆದು ವ್ಯಾಪಾರ ನಡೆಸುತ್ತಿದ್ದ ಯುವಕ ಹಾಗೂ ಆತನ ಸ್ನೇಹಿತರ ಮೇಲೆ ಗುಂಪೊಂದು ಅವಾಚ್ಯವಾಗಿ ನಿಂದಿಸಿ, ಹಲ್ಲೆ ನಡೆಸಿದ ಘಟನೆ ನ.10ರಂದು ಸಂಜೆ ನಡೆದಿದೆ. ಘಟನೆಯಲ್ಲಿ ಅಂಗಡಿ ಮಾಲೀಕ ಸೇರಿದಂತೆ ಇಬ್ಬರಿಗೆ ಗಾಯಗಳಾಗಿದ್ದು, ಈ ಸಂಬಂಧ 11 ಮಂದಿ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರೂರಿನ ಹಡವಿನಕೋಣೆ ನಿವಾಸಿ ಸಾಯಿರಾಮ್ (22) ಅವರು ನ.10ರಂದು ಸಂಜೆ ಸುಮಾರು 4.30ರ ವೇಳೆಗೆ ಗಾಂಧಿ ಮೈದಾನದಲ್ಲಿ ಪಟಾಕಿ ಅಂಗಡಿ ತೆರೆದು ವ್ಯಾಪಾರ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿಗಳಾದ ಶಶಿಕುಮಾರ್ ಮೇಸ್ತ, ತಿಮ್ಮಪ್ಪ ಮೇಸ್ತ, ಸೌಮ್ಯ ತಿಮ್ಮಪ್ಪ ಮೇಸ್ತ ಸೇರಿದಂತೆ ಒಟ್ಟು 11 ಮಂದಿ ಸ್ಥಳಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಆರೋಪಿಗಳ ಪೈಕಿ ಶಶಿಕುಮಾರ್ ಮೇಸ್ತ ತನ್ನ ತಂದೆ ತಿಮ್ಮಪ್ಪ ಮೇಸ್ತ ಹಾಗೂ ತಾಯಿ ಸೌಮ್ಯ ಅವರೊಂದಿಗೆ ಸ್ಕೂಟಿಯಲ್ಲಿ ಆಗಮಿಸಿ, ಸಾಯಿರಾಮ್ ಮತ್ತು ಅವರ ಸ್ನೇಹಿತರನ್ನು ಅವಾಚ್ಯವಾಗಿ ನಿಂದಿಸಿ, ಇಲ್ಲಿ ಅಂಗಡಿ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಅಂಗಡಿಯಲ್ಲಿದ್ದ ಪಟಾಕಿಗಳನ್ನು ಎಸೆದು, ಅಂಗಡಿಯೊಳಗಿದ್ದ ಸಾಯಿರಾಮ್ ಹಾಗೂ ಅವರ ಸ್ನೇಹಿತರಾದ ದರ್ಶನ ಮತ್ತು ಪಿಯುಷ ಅವರನ್ನು ದೂಡಿದ್ದಾರೆ. ಈ ವೇಳೆ ಕೌಂಟರ್‌ನಲ್ಲಿದ್ದ ಟೇಬಲ್ ಹಾಗೂ ದೊಡ್ಡ ಕಲ್ಲಿನಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಹಲ್ಲೆಯಿಂದ ಸಾಯಿರಾಮ್ ಅವರ ಕಾಲಿಗೆ ಹಾಗೂ ದರ್ಶನ ಅವರ ಎದೆಗೆ ಗಾಯಗಳಾಗಿದ್ದು, ಇತರ ಸ್ನೇಹಿತರಿಗೂ ಗಾಯಗಳಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಸಾಯಿರಾಮ್ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 167/2026ರಂತೆ ಭಾರತೀಯ ನ್ಯಾಯ ಸಂಹಿತೆಯ ಕಲಂ 118(1), 352, 351(2) ಹಾಗೂ 190ರಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.