ಡೈಲಿವಾರ್ತೆ: 12/ನ./2026

ಕೋಟ: ಜನತಾ ಸಮೂಹ ಸಂಸ್ಥೆಯಲ್ಲಿ ಹಬ್ಬ – 2026 ಸಂಭ್ರಮ: ಉದ್ಯೋಗಿಗಳ ಪ್ರತಿಭೆಗೆ ಸಾಂಸ್ಕೃತಿಕ ವೇದಿಕೆ

ಕೋಟ: ಜನತಾ ಫಿಶ್‌ಮೀಲ್‌ನಲ್ಲಿ ಹಬ್ಬ–2026 ಸಂಭ್ರಮ; ಉದ್ಯೋಗಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ
ಕೋಟ: ಜನತಾ ಫಿಶ್‌ಮೀಲ್ ಆ್ಯಂಡ್ ಆಯಿಲ್ ಪ್ರಾಡಕ್ಟ್ಸ್ ಸಂಸ್ಥೆಯ ವತಿಯಿಂದ ಆಯೋಜಿಸಲಾದ ‘ಹಬ್ಬ–2026’ ಕಾರ್ಯಕ್ರಮವು ಸಂಸ್ಥೆಯ ಆವರಣದಲ್ಲಿ ಸಂಭ್ರಮ ಹಾಗೂ ಸಾಂಸ್ಕೃತಿಕ ವಾತಾವರಣದೊಂದಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಮುಖರಾದ ಆನಂದ್ ಸಿ ಕುಂದರ್ ಅವರು ಮಾತನಾಡಿ, ಹಬ್ಬಗಳ ಆಚರಣೆಯು ಜೀವನದಲ್ಲಿ ಸಂತೋಷ ಮತ್ತು ಸೌಹಾರ್ದತೆಯನ್ನು ಹೆಚ್ಚಿಸುವುದರ ಜೊತೆಗೆ ಉದ್ಯೋಗಿಗಳ ನಡುವೆ ಪರಸ್ಪರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ. ಸಂಸ್ಥೆಯ ಸಾಮೂಹಿಕ ಪ್ರಗತಿಗೆ ಇಂತಹ ಕಾರ್ಯಕ್ರಮಗಳು ಪೂರಕವಾಗಿದ್ದು, ಉದ್ಯೋಗಿಗಳ ಪ್ರತಿಭೆ ಹಾಗೂ ಸಾಮರ್ಥ್ಯ ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿವೆ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಪ್ರಮುಖರಾದ ಪ್ರಶಾಂತ್ ಹಾಗೂ ರಕ್ಷಿತ್ ಅವರು ಉದ್ಯೋಗಿಗಳನ್ನುದ್ದೇಶಿಸಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ಉದ್ಯೋಗಿಯ ಪರಿಶ್ರಮ, ಬದ್ಧತೆ, ತಂಡದ ಮನೋಭಾವ ಮತ್ತು ಪರಸ್ಪರ ಸಹಕಾರ ಮಹತ್ವದ ಪಾತ್ರ ವಹಿಸುತ್ತದೆ. ಸಂಸ್ಥೆಯ ಯಶಸ್ಸಿನಲ್ಲಿ ಉದ್ಯೋಗಿಗಳ ಕೊಡುಗೆ ಅತ್ಯಂತ ಮೌಲ್ಯಯುತವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಉದ್ಯೋಗಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು. ಆಕರ್ಷಕ ನೃತ್ಯ ಪ್ರದರ್ಶನ, ಸಮೂಹ ಗಾಯನ, ಹಾಸ್ಯಮಯ ಕಿರುನಾಟಕ ಹಾಗೂ ಪೌರಾಣಿಕ ನಾಟಕಗಳು ಪ್ರೇಕ್ಷಕರ ಗಮನ ಸೆಳೆದವು. ಉದ್ಯೋಗಿಗಳಲ್ಲಿರುವ ಕಲಾತ್ಮಕ ಪ್ರತಿಭೆ ಮತ್ತು ಸೃಜನಶೀಲತೆಗೆ ಈ ಪ್ರದರ್ಶನಗಳು ಸಾಕ್ಷಿಯಾದವು.
ದಿವ್ಯಾ ಹಾಗೂ ವೈಷ್ಣವಿ ಅವರ ನೇತೃತ್ವದಲ್ಲಿ ನಡೆದ ‘ಗೆಸ್ ದಿ ಪ್ರೈಸ್’ ಸ್ಪರ್ಧೆಯು ಕಾರ್ಯಕ್ರಮಕ್ಕೆ ವಿಶೇಷ ಮನರಂಜನೆಯ ಮೆರುಗು ನೀಡಿತು. ಇದರೊಂದಿಗೆ ಉದ್ಯೋಗಿಗಳ ಸಂವಾದ ಹಾಗೂ ಪ್ರಶ್ನೋತ್ತರ ಕಾರ್ಯಕ್ರಮಗಳೂ ಆಯೋಜನೆಗೊಂಡು ಪರಸ್ಪರ ವಿಚಾರ ವಿನಿಮಯಕ್ಕೆ ಅವಕಾಶ ಕಲ್ಪಿಸಿದವು.

ಸಾಂಸ್ಕೃತಿಕ, ಮನರಂಜನಾ ಹಾಗೂ ಪೌರಾಣಿಕ ಕಲಾಪಗಳ ಸಮನ್ವಯದೊಂದಿಗೆ ನಡೆದ ಹಬ್ಬ–2026 ಕಾರ್ಯಕ್ರಮವು ಉದ್ಯೋಗಿಗಳ ಸಾಮೂಹಿಕ ಪಾಲ್ಗೊಳ್ಳುವಿಕೆ ಮತ್ತು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಯಿತು. ದೈನಂದಿನ ಕಾರ್ಯಚಟುವಟಿಕೆಗಳ ನಡುವೆಯೂ ಉದ್ಯೋಗಿಗಳಲ್ಲಿ ಒಗ್ಗಟ್ಟು, ಸಹಬಾಳ್ವೆ ಹಾಗೂ ಸಂಸ್ಥೆಯೊಂದಿಗಿನ ಆತ್ಮೀಯತೆಯನ್ನು ವೃದ್ಧಿಸುವ ಉದ್ದೇಶವನ್ನು ಕಾರ್ಯಕ್ರಮ ಯಶಸ್ವಿಯಾಗಿ ಸಾಕಾರಗೊಳಿಸಿತು.
ಕಾರ್ಯಕ್ರಮವನ್ನು ಮಮತಾ ನಿರೂಪಿಸಿದರು