


ಡೈಲಿವಾರ್ತೆ: 13/ನ./2026




ಮಗಳ ಮದುವೆ ಲಗ್ನಪತ್ರಿಕೆ ಹಂಚಲು ತೆರಳುತ್ತಿದ್ದ ದಂಪತಿಗೆ ಲಾರಿ ಡಿಕ್ಕಿ: ಪತ್ನಿ ಸ್ಥಳದಲ್ಲೇ ಸಾವು, ಪತಿ ಗಂಭೀರ ಗಾಯ!

ನೆಲಮಂಗಲ, ನ.13: ಮಗಳ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಭೀಕರ ರಸ್ತೆ ಅಪಘಾತ ಆಘಾತ ನೀಡಿದೆ. ಪುತ್ರಿಯ ವಿವಾಹದ ಲಗ್ನಪತ್ರಿಕೆ ಹಂಚಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿಗೆ ಹಿಂಬದಿಯಿಂದ ಬಂದ ಸಿಮೆಂಟ್ ಲಾರಿಯೊಂದು ಡಿಕ್ಕಿ ಹೊಡೆದು ಹರಿದ ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದು, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮದುರೆ ಹೋಬಳಿಯ ಉದ್ದಿಚಿಕ್ಕನಹಳ್ಳಿ ನಿವಾಸಿ ಲಕ್ಷ್ಮೀ ದೇವಿ ಅಲಿಯಾಸ್ ದೇವಮ್ಮ (42) ಮೃತಪಟ್ಟ ಮಹಿಳೆ. ಅವರ ಪತಿ ವಿಜಯ್ ಕುಮಾರ್ (48) ಗಂಭೀರವಾಗಿ ಗಾಯಗೊಂಡಿದ್ದು, ಅಪಘಾತದಲ್ಲಿ ಅವರ ಕಾಲು ತುಂಡಾಗಿದೆ ಎಂದು ತಿಳಿದುಬಂದಿದೆ.
ದಂಪತಿಯ ಪುತ್ರಿ ಇಂದ್ರಾಣಿ ಅವರ ವಿವಾಹವು ನವೆಂಬರ್ 26 ಮತ್ತು 27ರಂದು ನಿಗದಿಯಾಗಿತ್ತು. ಮಗಳ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸುವ ಉದ್ದೇಶದಿಂದ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ವಿಜಯ್ ಕುಮಾರ್ ಸಾಲ ಮಾಡಿ ಸಿದ್ಧತೆ ನಡೆಸುತ್ತಿದ್ದರು. ಕಳೆದ ಒಂದು ವಾರದಿಂದ ದಂಪತಿ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಮದುವೆಯ ಲಗ್ನಪತ್ರಿಕೆ ಹಂಚುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.
ಅದರಂತೆ ಶುಕ್ರವಾರವೂ ನೆಲಮಂಗಲದಲ್ಲಿರುವ ಸಂಬಂಧಿಕರಿಗೆ ಮದುವೆಯ ಆಹ್ವಾನ ಪತ್ರಿಕೆ ನೀಡಲು ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಸಿಮೆಂಟ್ ಲಾರಿ ದಂಪತಿ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಹರಿದಿದೆ. ಪರಿಣಾಮ ದೇವಮ್ಮ ಲಾರಿಯ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯ್ ಕುಮಾರ್ ಅವರ ಕಾಲುಗಳ ಮೇಲೂ ಲಾರಿ ಹರಿದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮಗಳ ಮದುವೆಯ ಸಂಭ್ರಮದಲ್ಲಿ ಮನೆಮಂದಿಗೆ ಆಹ್ವಾನ ನೀಡಲು ಹೊರಟಿದ್ದ ದಂಪತಿಗೆ ವಿಧಿ ಕ್ರೂರವಾಗಿ ಎರಗಿದೆ. ಕೆಲವೇ ದಿನಗಳಲ್ಲಿ ಮದುವೆಯ ಸಂಭ್ರಮ ಕಾಣಬೇಕಿದ್ದ ಮನೆಯಲ್ಲಿ ಇದೀಗ ಸಾವಿನ ಸುದ್ದಿ ಆವರಿಸಿದ್ದು, ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.
ಮೃತದೇಹವನ್ನು ನೆಲಮಂಗಲದ ಶವಾಗಾರಕ್ಕೆ ರವಾನಿಸಲಾಗಿದ್ದು, ಘಟನೆಯ ಕುರಿತು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

