ಕಾರವಾರ : ಜಿಲ್ಲೆಯ ಉದ್ಯೋಗಸ್ಥ ಮಹಿಳಾ ವಸತಿ ನಿಲಯಗಳ ಸುತ್ತಮುತ್ತ ಪ್ರದೇಶದಲ್ಲಿ ಸಿಸಿ ಟಿವಿ ಕ್ಯಾಮೆರಾ ಪೊಲೀಸ್ ಗಸ್ತು ತಿರುಗುವ ವ್ಯವಸ್ತೆ ಮಾಡಿ ಕಿಡಿಗೇಡಿಗಳಿಂದ ಸಮಸ್ಯೆ ಆಗದಂತಹ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಜರುಗಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರ ಸಮಸ್ಯೆಗೆ ಸ್ಪಂದಿಸುವುದಕ್ಕಾಗಿಯೇ ಸಖಿ ಒನ್ ಸ್ಟಾಪ್ ಸೆಂಟರ್ ಸ್ಥಾಪಿಸಲಾಗಿದ್ದು, ಇಲ್ಲಿ ಹೆಚ್ಚಿನ ಮಟ್ಟದ ದೂರವಾಣಿ ಕರೆಗಳು ಬರಬೇಕು. ಈ ಹಿನ್ನಲೆಯಲ್ಲಿ ಕೇಂದ್ರದ ದೂರವಣಿ ಸಂಖ್ಯೆಯನ್ನು ಪ್ರಚಾರಗೊಳಿಸಿ. ಮತ್ತು ದಾಖಲಾದ ಪ್ರಕರಣ ಮತ್ತು ಅವು ಯಾವ ಹಂತಕ್ಕೆ ಬಂದಿವೆ ಎಂಬ ಮಾಹಿತಿಯನ್ನು ಸಕಾಲದಲ್ಲಿ ನೀಡಬೇಕೆಂದರು.

ತೀವ್ರ ಅಪೌಷ್ಟಿಕ ಹಾಗೂ ಸಾಧಾರಣ ಅಪೌಷ್ಟಿಕ ಮಕ್ಕಳನ್ನು ಅಂಗನವಾಡಿ ಮಟ್ಟದಲ್ಲಿಯೆ ಗುರುತಿಸಿ ವಿಶೇಷ ಪೌಷ್ಟಿಕ ಶಿಬಿರಗಳನ್ನು ಹಮ್ಮಿಕೊಳ್ಳಿ ಮತ್ತು ಮೊಟ್ಟೆ ವಿತರಣೆಗೆ ಅನುದಾನ ಕೊರತೆಯಾಗುತ್ತಿದೆ ಎಂದು ಹೇಳಲಾಗುತ್ತಿರುವುದರಿಂದ ಸ್ವ ಸಹಾಯ ಸಂಘದ ಮಹಿಳೆಯರಿಂದ ಮೊಟ್ಟೆ ಖರೀದಿಸುವುದು ಸಮಸ್ಯೆಗೆ ಒಂದು ಪರಿಹಾರ ಅಂತ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಒಂದು ಸ್ವ ಸಹಾಯ ಸಂಘದೊಂದಿಗೆ ಮಾಡಿ ನೋಡಿ. ಅಂಗನವಾಡಿ ಕಟ್ಟಡಕ್ಕಾಗಿ ಜಾಗ ಗುರುತಿಸಿರುವಂತಹವುಗಳ ಒಂದು ಪಟ್ಟಿ ಮಾಡಿ ಕೊಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಪ್ರಿಯಾಂಗಾ ಎಂ ಅವರು ಮಾತನಾಡಿ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳು ಹೆರಿಗೆಯಾಗಿರುವ ಮಾಹಿತಿ ಇರುವುದರಿಂದ ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗಟ್ಟುವ ಕಾರ್ಯ ಸಮರ್ಪಕವಾಗಿಲ್ಲ ಎಂಬುವುದು ಗೋಚರಿಸುತ್ತಿದೆ ಈ ಹಿನ್ನಲೆಯಲ್ಲಿ ಇಲಾಖೆಯು ಪರಿಣಾಮಕಾರಿಯಾಗಿ ಬಾಲ್ಯವಿವಾಹ ತಡೆಗಟ್ಟುವ ಕಾರ್ಯ ಮಡಬೇಕು. ವಿಶೇಷವಾಗಿ ಜೋಯಿಡಾದಲ್ಲಿ ನಿಗಾವಹಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾರ್ಯ ನಿರ್ವಹಿಸಬೇಕೆಂದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕಿ ಸಿ ಶ್ಯಾಮಲಾರವರು ಮಾತನಾಡಿ ನೀಡಿ ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯದಡಿ ಶೌಚಾಲಯ ಕಾಮಗಾರಿ ವಿದ್ಯುತ್ ಸಂಪರ್ಕ, ಫ್ಯಾನ್ ಸಂಪರ್ಕ ಒದಗಿಸಲು ತೆಗೆದುಕೊಂಡ ಕ್ರಮ ಹಾಗೂ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಬಾಣಂತಿಯರ ಆರೋಗ್ಯ ತಪಸಣೆಯನ್ನು ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಮತ್ತು ಸಮುದಾಯ ಕೇಂದ್ರದಲ್ಲಿ ನೀಡುತ್ತಿರುವ ಮಾಹಿತಿಯನ್ನು ಸಭೆಗೆ ತಿಳಿಸಿದರು.

ಸಭೆಯಲ್ಲಿ ಮಹಿಳಾ ಸಹಾಯವಾಣಿ ೧೮೧ ಮತ್ತು ಒನ್ ಸ್ಟಾಪ್ ಸಖಿ ಸೆಂಟರ ನ್ ಬಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯವಾಧಿಗಳ ಸಂಘದ ಅಧ್ಯಕ್ಷ ಅನಿರುದ್ದ ಹಳದಿಪುರ , ಜಿಲ್ಲೆಯ ಎಲ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಇದ್ದರು.
ವರದಿ-ಸುಚಿತ್ರಾ ನಾಯ್ಕ ಹೊನ್ನಾವರ