ಡೈಲಿ ವಾರ್ತೆ:23 ಜನವರಿ 2023

ರಾಜಸ್ಥಾನ: ಅಜ್ಮೀರ್ ದರ್ಗಾಕ್ಕೆ ಪತ್ನಿ ಜತೆ ಜನಾರ್ದನ ರೆಡ್ಡಿ ಭೇಟಿ: ಚಾದರ, ಹೂ ಸಮರ್ಪಿಸಿದ ರೆಡ್ಡಿ ದಂಪತಿಗಳು

ಕೊಪ್ಪಳ: ಹೊಸ ಪಕ್ಷ ಘೋಷಣೆಯ ಬಳಿಕ ಮಾಜಿ ಸಚಿವ ಜನಾರ್ದನ ರೆಡ್ಡಿ, ರಾಜ್ಯ ರಾಜಕೀಯದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಮೊನ್ನೆಯಷ್ಟೇ ಕೊಪ್ಪಳದ ಗಂಗಾವತಿಯ ಬೂದಗಂಪ ಗ್ರಾಮದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದ ರೆಡ್ಡಿ, ಇಂದು ತಮ್ಮ ಪತ್ನಿ ಲಕ್ಷ್ಮೀ ಅರುಣಾ ಜೊತೆಗೆ ರಾಜಸ್ಥಾನದ ಅಜ್ಮೀರ್ ದರ್ಗಾಕ್ಕೆ ರೆಡ್ಡಿ ದಂಪತಿ ಭೇಟಿ ನೀಡಿದ್ದಾರೆ.



ಖಾಜಾ ಗರೀಬ್ ನವಾಜ್ ದರ್ಗಾಕ್ಕೆ ತೆರಳಿ ಚಾದರ ಮತ್ತು ಹೂವನ್ನು ಸಮರ್ಪಣೆ ಮಾಡಿದ್ದಾರೆ. ಅಲ್ಲದೆ, ವಿಶೇಷವಾದ ಪೂಜೆ ಸಹ ಸಲ್ಲಿಸಿದ್ದಾರೆ.

ಈಗಾಗಲೇ ಗಂಗಾವತಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ರೆಡ್ಡಿ ನಿರ್ಧಾರ ಮಾಡಿದ್ದಾರೆ. ಪತ್ನಿ ಲಕ್ಷ್ಮೀ ಅರುಣಾ ಅವರನ್ನು ಬಳ್ಳಾರಿ ಅಥವಾ ಸಿಂಧನೂರು ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂದಿರ ಮಸೀದಿಗಳಿಗೆ ದಂಪತಿ ಭೇಟಿ ನೀಡುತ್ತಿದ್ದು, ಯಾವುದೇ ವಿಘ್ನ ಬಾರದಿರಲೆಂದು ಪ್ರಾರ್ಥಿಸುತ್ತಿದ್ದಾರೆ.



ರಾಜ್ಯ ಬಿಜೆಪಿ ವಿರುದ್ಧ ಅಸಮಾಧಾನಗೊಂಡು ಇತ್ತೀಚಿಗಷ್ಟೇ ‘ಕಲ್ಯಾಣರಾಜ್ಯ ಪ್ರಗತಿ ಪಕ್ಷ’ ಸ್ಥಾಪಿಸಿರುವ ಗಾಲಿ ಜನಾರ್ದನ ರೆಡ್ಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಶತಾಯಗತಾಯ ಗೆಲ್ಲಿಸಿಕೊಳ್ಳುವ ಪಣ ತೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಂದಿರ, ಮಸೀದಿ ಭೇಟಿ ಒಂದೆಡೆಯಾದರೆ, ಸಮುದಾಯದ ಮುಖಂಡರುಗಳನ್ನು ಭೇಟಿಯಾಗಿ ಮತ ಸೆಳೆಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.