ಡೈಲಿ ವಾರ್ತೆ:23 ಜನವರಿ 2023

ಕೋಟ:ಕುಖ್ಯಾತ ಕಳ್ಳರ ಬಂಧನ, 19 ಲಕ್ಷ ರೂ ಮೌಲ್ಯದ ಚಿನ್ನಾಭರಣ ಹಾಗೂ 3 ವಾಹನಗಳು ವಶಕ್ಕೆ

ಕೋಟ: ಕೋಟ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲ್ಲೂಕು ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನದ ಮನೆಯಲ್ಲಿ ಕಳವು ಪ್ರಕರಣ ಸೇರಿದಂತೆ ಉಡುಪಿ, ದಕ್ಷಿಣಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಕಾಪು ತಾಲ್ಲೂಕು ಎಲ್ಲೂರು ಗ್ರಾಮದ ರಾಜೇಶ್‌‌‌‌‌ ದೇವಾಡಿಗ ಮತ್ತು ಈದು ಗ್ರಾಮದ ಮೊಹಮ್ಮದ್‌ ರಿಯಾಝ್‌ ಬಂಧಿತರು.
ಕೋಟ ಪೊಲೀಸರು ಸಾಯಿಬ್ರಕಟ್ಟೆ ಬಳಿ ಭಾನುವಾರ ವಾಹನ ತಪಾಸಣೆ ಸಂದರ್ಭ ರಾಜೇಶ ದೇವಾಡಿಗ ಮತ್ತು ಮೊಹಮ್ಮದ್‌‌‌‌ ರಿಯಾಜ್‌‌‌‌‌‌‌ ಹೊಸ್ಮಾರ್‌‌‌‌ ಚಲಾಯಿಸುತ್ತಿದ್ದ  ಕಾರಿನಲ್ಲಿ ಯಾವುದೇ ದಾಖಲೆಯಿಲ್ಲದ ಚಿನ್ನಾಭರಣಗಳು ಪತ್ತೆಯಾಗಿದ್ದವು. ಪೊಲೀಸರು ವಿಚಾರಿಸಿದಾಗ ಕಳೆದ ಸೆಪ್ಟಂಬರ್‌‌‌‌‌‌‌‌ನಲ್ಲಿ ಸಾಸ್ತಾನದ  ಚರ್ಚ್‌  ಬಳಿ  ಒಂದು  ಮನೆಯಿಂದ ಕಳವು ಮಾಡಿದ ಚಿನ್ನಾಭರಣಗಳಾಗಿರುವುದಾಗಿ ಅವುಗಳನ್ನು ಮಾರಾಟ ಮಾಡಲು ಶಿವಮೊಗ್ಗ ಕಡೆಗೆ ಹೋಗುತ್ತಿರುವುದಾಗಿ ತಿಳಿಸಿದ್ದಾರೆ.

ಈರ್ವರು ಹಳೆಯ ಕಳ್ಳತನದ ಆರೋಪಿಗಳಾಗಿದ್ದು, ಜೈಲುವಾಸ ಅನುಭವಿಸಿ ಬಿಡುಗಡೆಗೊಂಡಿರುತ್ತಾರೆ.  ರಾಜೇಶ್‌  ಮೇಲೆ ಉಡುಪಿ ಜಿಲ್ಲೆಯ ಹಲವು ಪೊಲೀಸ್‌ ಠಾಣೆಗಳಲ್ಲಿ ಒಟ್ಟು 12 ಕಳ್ಳತನ ಪ್ರಕರಣ ದಾಖಲಾಗಿದ್ದರೆ, ರಿಯಾಝ್‌
ಕಾರ್ಕಳದ ಪ್ಲೋರಿನ್ ಮಚಾದೋ ಅವರ ಕೊಲೆ ಹಾಗೂ ಸುಲಿಗೆ ಪ್ರಕರಣ ಹಾಗೂ 2021 ರಲ್ಲಿ ಕಾಸರಗೊಡು ಜಿಲ್ಲೆಯಲ್ಲಿ ನಡೆದ ಪ್ರಮುಖ ಪ್ರಕರಣವಾದ ಮಂಜೇಶ್ವರದ ರಾಜಧಾನಿ ಜ್ಯುವೆಲರ್ಸ್‌ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಈ ಇಬ್ಬರು ಆರೋಪಿಗಳು ಹಿರಿಯಡಕ ಜೈಲಿನಲ್ಲಿರುವಾಗ ಪರಿಚಯವಾಗಿದ್ದು ರಾತ್ರಿ ಮನೆ ಕಳ್ಳತನ ನಡೆಸಲು ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾತ್ರಿ ಹೊತ್ತು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ನಡೆಸಲು ಸಂಚು ನಡೆಸುತ್ತಿದ್ದರು. 
ಆರೋಪಿಗಳಿಂದ ಕಳ್ಳತನ ನಡೆಸಿದ ಸುಮಾರು ರೂ. 15 ಲಕ್ಷದ ಚಿನ್ನಾಭರಣ ಸೇರಿದಂತೆ ಒಟ್ಟು ರೂ. 19 ಲಕ್ಷ ಅಂದಾಜಿನ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿಗಳನ್ನು ಹಿಡಿಯಲು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ.ಎಚ್‌ ಅವರ ಆದೇಶದಂತೆ ಬ್ರಹ್ಮಾವರದ ಇನ್ಸ್‌ಪೆಕ್ಟರ್ ಅನಂತಪದ್ಮನಾಭ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಕಾರ್ಯಾಚರಣೆಯಲ್ಲಿ ಕೋಟ ಸಬ್‌ಇನ್ಸ್‌ಪೆಕ್ಟರ್ ಮಧು ಬಿ.ಈ, ಪ್ರೋಬೇಷನರಿ ಸಬ್‌ಇನ್ಸ್‌ಪೆಕ್ಟರ್ ನೂತನ್ ಡಿ, ಪುಷ್ಪಾ, ಕೋಟ ಠಾಣೆಯ ಎ.ಎಸ್‌.ಐ ರವಿಕುಮಾರ್‌, ಸಿಬ್ಬಂದಿ ಪ್ರದೀಪ ನಾಯಕ್, ರಾಘವೇಂದ್ರ, ಪ್ರಸನ್ನ ಮತ್ತು ಬ್ರಹ್ಮಾವರದ ವೆಂಕಟರಮಣ ದೇವಾಡಿಗ, ಸಂತೋಷ್‌ ರಾಥೋಡ್‌, ಕೃಷ್ಣಪ್ಪ, ಪ್ರದೀಪ್‌ ನಾಯಕ್‌, ನಿತಿನ್‌, ದಿನೇಶ್‌, ಗೋಪಾಲ, ಶೇಖರ ಸೇರಿಹಾರ್ ಭಾಗವಹಿಸಿದ್ದರು,, ಕಾಪು ವೃತ್ತದ ಸಿಬ್ಬಂದಿ ಸಹಕರಿಸಿದ್ದರು.
 
ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಎಂ. ಹೆಚ್ ಐ.ಪಿ.ಎಸ್ ರವರು ತಂಡವನ್ನು ಅಭಿನಂದಿಸಿರುತ್ತಾರೆ.