


ಡೈಲಿ ವಾರ್ತೆ:23 ಜನವರಿ 2023


ಕೋಟ: ಬೈಕ್ ಅಪಘಾತದಲ್ಲಿ ಗಾಯಗೊಂಡ ಯುವಕ ಚಿಕಿತ್ಸೆ ಫಲಿಸದೆ ಮೃತ್ಯು
ಕೋಟ: ಖಾಸಗಿ ಬಸ್ಸಿಗೆ ಬೈಕ್ ಢಿಕ್ಕಿ ಹೊಡೆದು ಬೈಕ್ ಸವಾರರೀರ್ವರು ಗಂಭೀರ ಗಾಯಗೊಂಡ ಘಟನೆ ರವಿವಾರ ಕೋಟದಲ್ಲಿ ಸಂಭವಿಸಿತ್ತು.
ಈ ದುರ್ಘಟನೆಯಲ್ಲಿ ಗಾಯಾಳುವಾಗಿದ್ದ ಬೈಕ್ ಸವಾರ ಕೋಟೇಶ್ವರದ ವಕ್ವಾಡಿ ನಿವಾಸಿ ಗಣೇಶ್ ಪೂಜಾರಿ (33) ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಸೊಮವಾರ ಮೃತಪಟ್ಟಿದ್ದಾನೆ.
ಕುಂದಾಪುರದಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಬಸ್ಸು ಏಕಾಏಕಿ ಕೋಟ ಬಸ್ಸು ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದು, ಈ ಸಂದರ್ಭ ಹಿಂಬದಿಯಿಂದ ಬರುತ್ತಿದ್ದ ಬೈಕ್ ಬಸ್ಸಿಗೆ ಢಿಕ್ಕಿ ಹೊಡೆದಿದ್ದು, ಸವಾರ ಗಣೇಶ್ ಮತ್ತು ಸಹ ಸವಾರ ಸುಮಂತ್ ಗಂಭೀರ ಗಾಯಗೊಂಡಿದ್ದರು. ತತ್‌ಕ್ಷಣ ಅವರನ್ನು ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಅವರು ಆಂಬುಲೆನ್ಸ್ ನಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತ ಗಣೇಶ್ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದು ತಂದೆ, ತಾಯಿ, ಕಿರಿಯ ಸಹೋದರಿಯನ್ನು ಅಗಲಿದ್ದಾನೆ. ಗಣೇಶ್‌ನ ಸಹೋದರಿಗೆ ವಿವಾಹ ನಿಶ್ಚಯವಾಗಿದ್ದು ಇದೀಗ ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಬಡ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.