ಡೈಲಿ ವಾರ್ತೆ:25 ಜನವರಿ 2023

ಸಮಾನ ಮನಸ್ಸುಗಳು ಒಂದಾಗಿ ಸಂವಿಧಾನ ರಕ್ಷಿಸುವ ಮಹತ್ಕಾರ್ಯಕ್ಕೆ ಮುಂದಾಗ ಬೇಕು: ಬಂಟ್ವಾಳ ಸಂವಿಧಾನ ಅರಿವಿನ ಹಬ್ಬದಲ್ಲಿ ಡಾ. ಸಿದ್ದನ ಗೌಡ ಪಾಟೀಲ

ಬಂಟ್ವಾಳ : ಭಾರತದ ಸಂವಿಧಾನವನ್ನು ವಿಕಲಾಂಗ ಗೊಳಿಸುವ ವ್ಯವಸ್ಥಿತ ಕುತಂತ್ರಗಳು ನಡೆಯುತ್ತಿದೆ. ಇತ್ತೀಚಿಗೆ ಜಾರಿಯಾಗುತ್ತಿರುವ ಕಾನೂನುಗಳು ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುತ್ತಿದೆ. ಜೀವಪರ ಕಾಳಜಿಯುಳ್ಳ ಸಮಾನ ಮನಸ್ಸುಗಳು ಒಂದಾಗಿ ಸಂವಿಧಾನ ರಕ್ಷಿಸುವ ಮಹತ್ಕಾರ್ಯಕ್ಕೆ ಮುಂದಾಗಬೇಕು ಎಂದು ಎಡಪಂಥೀಯ ಚಿಂತಕ ಹಾಗೂ ಹೊಸತು ಪತ್ರಿಕೆಯ ಸಂಪಾದಕ ಡಾ.ಸಿದ್ದನಗೌಡ ಪಾಟೀಲ ಅಭಿಪ್ರಾಯಪಟ್ಟರು.

ಮಂಗಳವಾರ ಬಿಸಿರೋಡಿನ ಸ್ಪರ್ಶ ಕಲಾಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ಜರುಗಿದ ಸಂವಿಧಾನ ಅರಿವಿನ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.



ಮತೀಯವಾದ ಮತ್ತು ಮಾನವತಾ ವಾದದ ನಡುವಿನ ಸಂಘರ್ಷದಿಂದ ಬಹು ಸಂಸ್ಕೃತಿಯ ಬಹುತ್ವದ ಭಾರತ ನಲುಗುತ್ತಿದೆ. ಸಮತೆ, ಸಮಾನತೆ, ಧರ್ಮ ನಿರಪೇಕ್ಷತೆ, ಬ್ರಾತೃತ್ವ, ಸಾಮಾಜಿಕ ನ್ಯಾಯದ ಮೌಲ್ಯಗಳಿಗೆ ವ್ಯತಿರಿಕ್ತವಾದ ನೀತಿಗಳು ಜ್ಯಾರಿಯಾಗುತ್ತಿರುವುದು ವಿಷಾದನೀಯ ಎಂದು ಅವರು
ಪ್ರಜಾಪ್ರಭುತ್ವ ಅರ್ಥಪೂರ್ಣ ಗೊಳ್ಳಲು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ರಂಗ ಸ್ವತಂತ್ರವಾಗಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಆದರೆ ಈ ಪರಿಕಲ್ಪನೆಗಳನ್ನೇ ಧ್ವಂಸಗೊಳಿಸ ಲಾಗಿದೆ. ಬಹುತೇಕ ಮಾಧ್ಯಮ ಗಳನ್ನು ಖರೀದಿಸಲಾಗಿದೆ ಎಂದರು.

ಜನತೆ ಯಾವುದನ್ನೂ ಪ್ರಶ್ನಿಸಬಾರದು ಎಂದು ಆರಾಜಕತೆಯನ್ನು ಹುಟ್ಟುಹಾಕಲಾಗಿದೆ. ದಿನನಿತ್ಯ ಸಾಮಾಜಿಕ, ಧಾರ್ಮಿಕ ಸಂಘರ್ಷಗಳನ್ನು ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಅಲ್ಪಸಂಖ್ಯಾತ ಸಮಾಜದಿಂದ ಬಹುಸಂಖ್ಯಾತ ಸಮಾಜಕ್ಕೆ ಭಾರೀ ಅಪಾಯವಿದೆ ಎಂಬ ಆಧಾರರಹಿತ ಕಥೆಗಳನ್ನು ಕಟ್ಟಲಾಗುತ್ತಿದೆ. ಈ ನಡುವೆ ತಳ ಸಮುದಾಯದ ಶೈಕ್ಷಣಿಕ ಹಕ್ಕುಗಳನ್ನು ಮೊಟಕು ಗೊಳಿಸಲಾಗುತ್ತಿದೆ ಎಂದರು.

ಸಾಹಿತಿ, ನ್ಯಾಯವಾದಿ ಕೆ.ಆರ್. ವಿದ್ಯಾಧರ್ ಅಧ್ಯಕ್ಷತೆ ವಹಿಸಿದ್ದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ. ಎ.ಬಿ.ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ಗೋಷ್ಠಿಯಲ್ಲಿ “ದೇಶದ ಪ್ರಸ್ತುತ ಆರ್ಥಿಕತೆ, ಭ್ರಮೆ ಮತ್ತು ವಾಸ್ತವ” ವಿಷಯದ ಬಗ್ಗೆ ಶಿಕ್ಷಣ ತಜ್ಞ ಶ್ರೀಪಾದ ಭಟ್, “ಭಾರತದ ಬಹುತ್ವದ ಎದುರಿನ ಸವಾಲುಗಳು” ಎಂಬ ವಿಷಯದಲ್ಲಿ ಸಾಹಿತಿ ಎಲ್. ಎನ್. ಮುಕುಂದ ರಾಜ್, “ದಲಿತರು, ಹಿಂದುಳಿದ ವರ್ಗ, ಮಹಿಳೆಯರು, ಅಲ್ಪಸಂಖ್ಯಾತರ ಅಸ್ತಿತ್ವದ ಸವಾಲುಗಳು” ಎಂಬ ವಿಷಯದಲ್ಲಿ ಶಿಕ್ಷಣ ತಜ್ಞೆ ಪರ್ಝಾನ ಅಶ್ರಫ್ ಅವರುಗಳು ವಿಚಾರ ಮಂಡಿಸಿದರು.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಚೆನ್ನಕೇಶವ ಉಪಸ್ಥಿತರಿದ್ದರು.

ಸಂವಿಧಾನ ಪೀಠಿಕೆ ಓದಿ ಪ್ರತಿಜ್ಞೆ ಗೈದು, ನಾಡ ಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜನಪ್ರೀತಿ ಬಳಗ ಮಂಗಳೂರು ತಂಡದ ಕಲಾವಿದರು ಸೌಹಾರ್ದ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ಬಿ.ಶೇಖರ್ ಸ್ವಾಗತಿಸಿ, ಮಾನವ ಬಂಧುತ್ವ ವೇದಿಕೆಯ ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್. ಸತೀಶ್ ಕುಮಾರ್ ಪ್ರಾಸ್ತಾವನೆ ಗೈದರು. ಸುರೇಶ್ ಕುಮಾರ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು. ಪ್ರೇಮನಾಥ ಕೆ
ವಂದಿಸಿದರು.