ಡೈಲಿ ವಾರ್ತೆ: 27 ಜನವರಿ 2023
ಬ್ರಹ್ಮಾವರ : ತಾಲ್ಲೂಕು ಮಟ್ಟದ ರಾಷ್ಟ್ರೀಯ ಮತ್ತು ನಾಡಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಆಡಳಿತ ಮಂಡಳಿ ವತಿಯಿಂದ 74ನೇ ಗಣರಾಜ್ಯೋತ್ಸವ ಆಚರಣೆ, ಸಾಧಕರಿಗೆ ಸನ್ಮಾನ
ಬ್ರಹ್ಮಾವರ : ತಾಲ್ಲೂಕು ಮಟ್ಟದ ರಾಷ್ಟ್ರೀಯ ಮತ್ತು ನಾಡಹಬ್ಬಗಳ ಆಚರಣಾ ಸಮಿತಿ ಮತ್ತು ತಾಲ್ಲೂಕು ಆಡಳಿತ ಮಂಡಳಿ ವತಿಯಿಂದ ಬ್ರಹ್ಮಾವರದಲ್ಲಿ ಗುರುವಾರ ನಡೆದ ೭೪ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ, ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವ, ಗ್ರಾಮ ಒನ್ ಅತ್ಯುತ್ತಮ ಸೇವೆ ಮಾಡಿದವರನ್ನು ವಿಶೇಷವಾಗಿ ಗುರುತಿಸಲಾಯಿತು.
ಇದಕ್ಕೂ ಮುನ್ನ ಬ್ರಹ್ಮಾವರದ ತಹಶೀಲ್ದಾರ್ ರಾಜಶೇಖರ ಮೂರ್ತಿ ದ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿ ಅಸಮಾನತೆಯನ್ನು ದೂರ ಮಾಡಿ, ಎಲ್ಲ ನಾಗರಿಕರು ಸೇರಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿದಲ್ಲಿ ಮಾತ್ರ ನಮ್ಮ ಆಚರಣೆಗಳು ಉಳಿಯುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ಪ್ರಗತಿಪರ ಕೃಷಿಕ ಸೋಮ ಪೂಜಾರಿ, ನಿವೃತ್ತ ಯೋಧ ನಾಗರಾಜ ಗಾಣಿಗ, ಯಕ್ಷಗಾನದ ಹಿರಿಯ ಕಲಾವಿದ ಸರ್ವೋತ್ತಮ ಗಾಣಿಗ ಮತ್ತು ಸಾಹಿತಿ ನುಕ್ಕೂರಿನ ಲಕ್ಷ್ಮೀ ಭಟ್ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಾದ ಮಣೂರು ಶಾಲೆಯ ಪ್ರಗತಿ, ಬ್ರಹ್ಮಾವರ ಶಾಲೆಯ ಅನನ್ಯ ಮತ್ತು ಜಾನುವಾರುಕಟ್ಟೆ ಶಾಲೆಯ ರಮ್ಯ ಅವರಿಗೆ ಸರ್ಕಾರ ವತಿಯಿಂದ ನೀಡಲಾದ ಲ್ಯಾಪ್‌ಟಾಪ್‌ಗಳನ್ನು ಹಸ್ತಾಂತರಿಸಲಾಯಿತು.
ಗ್ರಾಮ ಒನ್ ಯೋಜನೆಯಡಿ ಅತ್ಯುತ್ತಮ ಸೇವೆ ನೀಡಿದ ಬಾರ್ಕೂರಿನ ಸತೀಶ್ ಮೈಂದರ್, ಕಳ್ತೂರು ಸಂತೆಕಟ್ಟೆಯ ಪವನ್ ಕಾಮತ್ ಮತ್ತು ವಡ್ಡರ್ಸೆಯ ಸರೋಜಾ ಕೆ ಅವರನ್ನು ವಿಶೇಷವಾಗಿ ಗುರುತಿಸಲಾಯಿತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ವಿ ಇಬ್ರಾಹಿಂಪುರ, ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ, ಸಬ್ ಇನ್ಸ್‌ಪೆಕ್ಟರ್ ರಾಜಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್,ಜಿ.ಪಂ ಮಾಜಿ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಇರ್ಮಾಡಿ ತಿಮ್ಮಪ್ಪ ಹೆಗ್ಡೆ, ಸರ್ಕಾರಿ ಪಿಯು ಕಾಲೇಜಿನ ಉಪಪ್ರಾಂಶುಪಾಲ ಬಿ.ಟಿ.ನಾಯ್ಕ, ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಾವತಿ, ಸೇವಾದಳದ ಹರೀಧ್ರನಾಥ್ ಶೆಟ್ಟಿ, ಕೋಟ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಮಧು, ರೋಟರಿ ಕ್ಲಬ್ ಅಧ್ಯಕ್ಷ ದಿನೇಶ್ ನಾಯರಿ, ನಿವೃತ್ತ ಮುಖ್ಯೋಪಾಧ್ಯಾಯ ಆರೂರು ತಿಮ್ಮಪ್ಪ ಶೆಟ್ಟಿ ಇದ್ದರು.
ಕಂದಾಯ ಅಧಿಕಾರಿ ಲಕ್ಷ್ಮೀನಾರಾಯಣ ಭಟ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಜಗದೀಶ್ ಶೆಟ್ಟಿ ವಂದಿಸಿದರು., ಅಧ್ಯಾಪಕ ಶಶಿಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಸಬ್‌ಇನ್ಸ್‌ಪೆಕ್ಟರ್ ರಾಜಶೇಖರ್ ನೇತೃತ್ವದಲ್ಲಿ ಆಕರ್ಷಕ ಪಥಸಂಚಲನದಲ್ಲಿ ಭಾರತ ಸೇವಾದಳ, ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ, ನಿರ್ಮಲ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಭಾಗಿಯಾದರು.