ಡೈಲಿ ವಾರ್ತೆ: 30 ಜನವರಿ 2023
ಫಾಝಿಲ್ ಕೊಲೆಯಲ್ಲಿ ಶರಣ್ ಪಂಪ್ವೆಲ್ ಪಾತ್ರದ ಬಗ್ಗೆ ಮರು ತನಿಖೆಯಾಗಲಿ: ಡಿವೈಎಫ್ ಐ ಆಗ್ರಹ
ಮಂಗಳೂರು;ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತಿಯಾಗಿ ಸುರತ್ಕಲ್‌ನಲ್ಲಿ ಫಾಝಿಲ್ ಹತ್ಯೆ ನಡೆಸಿರುವುದಾಗಿ ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಸಮರ್ಥಿಸಿಕೊಂಡಿದ್ದು, ಪ್ರಕರಣದಲ್ಲಿ ಶರಣ್ ಪಾತ್ರದ ಕುರಿತು ಮರು ತನಿಖೆಯಾಗಲಿ ಎಂದು ಡಿವೈಎಫ್‌ಐ ಆಗ್ರಹಿಸಿದೆ.
ಶರಣ್ ಪಂಪ್‌ವೆಲ್ ತುಮಕೂರಿನಲ್ಲಿ ಸಂಘ ಪರಿವಾರದ ವೇದಿಕೆಯಲ್ಲಿ ಮಾಡಿದ ಅತಿರೇಕದ ದ್ವೇಷ ಭಾಷಣ ದುಷ್ಟತನದ ಪರಮಾವಧಿ. ಇದು ತೀರಾ ಆತಂಕಕಾರಿ ಬೆಳವಣಿಗೆ. ಕೊಲೆಗಳ ಸಮರ್ಥನೆ, ಬೆದರಿಕೆ ಜನಾಂಗ ಹತ್ಯೆಗೆ ಪ್ರಚೋದನೆ ನೀಡುವಂತಿದೆ. ನಾಗರಿಕ ಸಮಾಜದಲ್ಲಿ ಇದು ಭೀತಿ ಮೂಡಿಸಿದೆ. ಫಾಝಿಲ್ ಕೊಲೆಗೆ ವಿಎಚ್ ಪಿ, ಬಿಜೆಪಿ ಮುಖಂಡರ ಬೆಂಬಲ ದೊರಕಿರುವ ಅನುಮಾನ ಕೊಲೆ ನಡೆದ ಸಂದರ್ಭದಲ್ಲೇ ವ್ಯಕ್ತವಾಗಿತ್ತು. ಪೊಲೀಸರು ರಾಜಕೀಯ ಒತ್ತಡದಿಂದ ಕೊಲೆಯ ಪಿತೂರಿದಾರರನ್ನು ರಕ್ಷಿಸುತ್ತಿದ್ದಾರೆ ಎಂದು ಫಾಝಿಲ್ ಕುಟುಂಬ ಆರೋಪಿಸಿತ್ತು. ಶರಣ್ ಪಂಪ್‌ವೆಲ್ ಭಾಷಣ ಈ ಅನುಮಾನ, ಆರೋಪವನ್ನು ಪುಷ್ಟೀಕರಿಸಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.
ಕೊಲೆ, ನರಮೇಧದ ಸಮರ್ಥನೆಯ ಭಾಷಣಕ್ಕಾಗಿ ಶರಣ್ ಪಂಪ್‌ವೆಲ್‌ರನ್ನು ಕಠಿಣ ಕಾಯ್ದೆಯಡಿ ಬಂಧಿಸಬೇಕು, ಫಾಝಿಲ್ ಕೊಲೆಯಲ್ಲಿ ಶರಣ್ ಪಂಪ್‌ವೆಲ್ ಮತ್ತಿತರ ನಾಯಕರ ಪಾತ್ರದ ಕುರಿತು ಮರು ತನಿಖೆ ಮಾಡಬೇಕು ಎಂದು ಡಿವೈಎಫ್‌ಐ ಆಗ್ರಹಿಸುತ್ತದೆ.ನಾಗರಿಕ ಸಮಾಜ ಒಂದಾಗಿ ಶರಣ್ ಪಂಪ್ ವೆಲ್ ಭಾಷಣವನ್ನು ಖಂಡಿಸಬೇಕು ಹಾಗೂ ಕ್ರಮಕ್ಕಾಗಿ ಒತ್ತಾಯಿಸಬೇಕು ಎಂದವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ನಿರುದ್ಯೋಗ, ಬಡತನದಿಂದ ಹತಾಶಗೊಂಡಿರುವ ಯುವಕರ ಕೈಗೆ ತಲವಾರು ನೀಡಿ ಗಲಭೆಗಿಳಿಸುವ, ಇಡೀ ಸಮಾಜವನ್ನು ಕ್ರಿಮಿನಲೀಕರಣಗೊಳಿಸುವ, ಚುನಾವಣೆ ಸನಿಹದಲ್ಲಿರುವ ಸಂದರ್ಭ ಮತೀಯ ಧ್ರುವೀಕರಣ ರಾಜಕೀಯ ದುರುದ್ದೇಶಗಳನ್ನು ಹೊಂದಿದೆ. ಹಾಗೂ ಶರಣ್ ಪಂಪ್ ವೆಲ್ ಗೆ ಬಿಜೆಪಿ ಸರಕಾರದ ಬೆಂಬಲವೂ ದೊರಕಿರುವುದು ಎದ್ದು ಕಾಣುತ್ತಿದೆ ಎಂದವರು ಆರೋಪಿಸಿದ್ದಾರೆ.