ಡೈಲಿ ವಾರ್ತೆ: 30 ಜನವರಿ 2023

ಖಾಸಗಿ ವಿಡಿಯೋ ವೈರಲ್ ಮಾಡುವ ಬೆದರಿಕೆಗೆ ಹೆದರಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ

ಬೆಳ್ತಂಗಡಿ: ಇನ್ ಸ್ಟ್ರಾಗ್ರಾಮ್ ನಲ್ಲಿ ಪರಿಚಿತರಾಗಿದ್ದ ವ್ಯಕ್ತಿಯೋರ್ವರು ಬೆಳ್ತಂಗಡಿ ಖಾಸಗಿ ಕಾಲೇಜಿನ ವಿದ್ಯಾರ್ಥಿಯೋರ್ವನ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಹಾಕಿದ ಬೆದರಿಕೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಧರ್ಮಸ್ಥಳ ಗ್ರಾಮದ ಅಶೋಕ್ ನಗರ ನಿವಾಸಿ, ಬೆಳ್ತಂಗಡಿ ಖಾಸಗಿ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ (19 ವರ್ಷ) ಮೃತಪಟ್ಟ ವಿದ್ಯಾರ್ಥಿ.

ಹರ್ಷಿತ್ ಬೆಳ್ತಂಗಡಿ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ತನ್ನ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಸುಮಾರು 15 ದಿನಗಳ ಹಿಂದೆ ಓರ್ವ ಅಪರಿಚಿತ ವ್ಯಕ್ತಿಯು ಸಂಪರ್ಕಕ್ಕೆ ಬಂದಿದ್ದು, ಆ ಬಳಿಕ ಹರ್ಷಿತ್ ಆತನೊಂದಿಗೆ ಇನ್‌ ಸ್ಟಾಗ್ರಾಂ ಮೂಲಕ ಚಾಟ್ ಮಾಡಿಕೊಂಡಿದ್ದ.

ಆ ಬಳಿಕ ಅಪರಿಚಿತ ವ್ಯಕ್ತಿಯು ಮೊಬೈಲ್‌ ಗೆ ವಿಡಿಯೋ ಕಾಲ್‌ ಮಾಡಿ ಮಾತಾಡಿ, ಹರ್ಷಿತ್ ಬಳಿ ನಿಮ್ಮ ವೈಯಕ್ತಿಕ ವಿಡಿಯೋ ನನ್ನ ಬಳಿ ಇದ್ದು, ಇದನ್ನು ಸಾರ್ವಜನಿಕವಾಗಿ ವೈರಲ್‌ ಮಾಡುತ್ತೇನೆ‌, ವೈರಲ್‌ ಮಾಡಬಾರದು ಎಂದಾದರೆ ತನಗೆ 11,000 ರೂ. ಕೊಡಬೇಕೆಂದು ಬೇಡಿಕೆ ಇಟ್ಟಿದ್ದನು.

ಇದಕ್ಕೆ‌ ಹರ್ಷಿತ್ ಜ.23 ರವರೆಗೆ ಅವಕಾಶ ಕೊಡುವಂತೆ ಕೇಳಿದ್ದು, ಆದರೆ ಜ.24 ಮಧ್ಯಾಹ್ನದವರೆಗೂ ಹಣ ಹೊಂದಿಸಲು ಸಾಧ್ಯವಾಗದೇ ಇದ್ದುದ್ದರಿಂದ ಆಪಾದಿತನಿಗೆ ಹಣ ಕೊಡದ ಕಾರಣ ಆತನು ವೈಯಕ್ತಿಕ ವಿಡಿಯೋ ವೈರಲ್‌ ಮಾಡಿದರೆ ಮಾನ ಹೋಗಬಹುದೆಂಬ ಭಯದಿಂದ ಜ.24 ರಂದು ಮಧ್ಯಾಹ್ನದ ನಂತರ ಇಲಿ ಪಾಷಾಣವನ್ನು ಸೇವಿಸಿದ್ದು, ಬಳಿಕ ಅಸ್ವಸ್ಥರಾದ ಹರ್ಷಿತ್ ಗೆ ಚಿಕಿತ್ಸೆಗಾಗಿ ಉಜಿರೆ ಬೆನಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಅಲ್ಲಿನ ವೈದ್ಯರು ಆತನನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಹಿನ್ನೆಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯನ್ನಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಿದ್ದರು.

ಆದರೆ ಚಿಕಿತ್ಸೆಗೆ ಸ್ಪಂದಿಸಿದೆ ಜ.29 ರಂದು ಸಂಜೆ ಮೃಪಟ್ಟಿರುವುದಾಗಿ ಖಚಿತವಾಗಿದೆ.