ಡೈಲಿ ವಾರ್ತೆ: 30 ಜನವರಿ 2023
ಮಂಗಳೂರು: ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ದೂರು ದಾಖಲು
ಮಂಗಳೂರು: ಮರೋಳಿ ಸೂರ್ಯನಾರಾಯಣ ದೇವಸ್ಥಾನದ ಜಾತ್ರೋತ್ಸವ ಹಿನ್ನೆಲೆಯಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬಂದಿಯ ಮೇಲೆ ವ್ಯಕ್ತಿಯೊಬ್ಬ ಕೈ ಮಾಡಿ ಹಲ್ಲೆ ಮಾಡಿರುವ ಕುರಿತಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.29ರಂದು ಪೊಲೀಸ್ ಸಿಬಂದಿಯವರಾದ ವಿನ್ಸೆಂಟ್ ಅಶೋಕ್ ಲೋಬೋ ಮತ್ತು ದಿನೇಶ್ ರಾಠೊಡ್ ಅವರು ಪೊಲೀಸ್ ಸಮವಸ್ತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾತ್ರಿ ಸುಮಾರು 9.30ರ ವೇಳೆಗೆ ಅಲ್ಲಿಗೆ ಬಂದ ಅಚಲ್ ಎಂಬಾತ ತನ್ನ ಸ್ಕೂಟರನ್ನು ದೇವಸ್ಥಾನದ ಬಳಿಯ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಿದ್ದು, ಸ್ವಲ್ಪ ಮುಂದೆ ಹೋಗಿ ನಿಲ್ಲಿಸುವಂತೆ ಪೊಲೀಸರು ಹೇಳಿದ್ದಾರೆ. ಅದಕ್ಕೆ ಆತ ವಿನ್ಸೆಂಟ್ ಅಶೋಕ್ ಅವರಲ್ಲಿ, ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸದಂತೆ ಹೇಳಲು ನೀನು ಯಾರು? ನಿನಗೆ ಎಷ್ಟು ಕೆಲಸವಿದೆ ಅದನ್ನು ನೀನು ಮಾಡು, ನಾನು ಸ್ಕೂಟರ್‌ನ್ನು ತೆಗೆಯುವುದೇ ಇಲ್ಲ. ನೀನು ಏನು ಮಾಡುತ್ತಿಯೋ ಅದನ್ನು ಮಾಡು ಎಂದು ಏರುಧ್ವನಿಯಲ್ಲಿ ಹೇಳಿದ್ದಾನೆ. ಬಳಿಕ ಸ್ಕೂಟರ್‌ನ ಕೀಯನ್ನು ಅದರಲ್ಲೇ ಬಿಟ್ಟು ಅಲ್ಲಿಂದ ಹೋಗಿದ್ದಾನೆ. ಇತರ ವಾಹನ ಹಾಗೂ ಜನ ಸಂಚಾರಕ್ಕೆ ತೊಂದರೆಯಾದ ಹಿನ್ನೆಲೆಯಲ್ಲಿ ಅವರು ಸ್ಕೂಟರನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ಇಟ್ಟಿದ್ದಾರೆ. ಆಗ ಆತ ಮತ್ತೆ ಬಂದು, ನನ್ನ ಸ್ಕೂಟರ್ ಅಲ್ಲಿಂದ ತೆಗೆಯಲು ನೀನು ಯಾರು? ಎಂದು ಹೇಳಿ, ಅವರ ಸಮವಸ್ತ್ರದ ಭುಜದ ಪಟ್ಟಿಯನ್ನು ಹಿಡಿದು, ಎಳೆದು ಕರ್ತವ್ಯಕ್ಕೆ ಅಡ್ಡಿಪಡಿಸಿ, ಎಡ ಕೆನ್ನೆಗೆ, ಎಡ ಕುತ್ತಿಗೆಗೆ ಹಾಗೂ ಎದೆಯ ಎಡಭಾಗಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.