ಡೈಲಿ ವಾರ್ತೆ: 31 ಜನವರಿ 2023
ಮಂಗಳೂರು: ಶರಣ್ ಪಂಪ್ ವೆಲ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ ಫಾಝಿಲ್ ತಂದೆ
ಮಂಗಳೂರು: ತುಮಕೂರು ಹಾಗೂ ಉಳ್ಳಾಲದಲ್ಲಿ ಭಜರಂಗದಳದ ನೇತೃತ್ವದಲ್ಲಿ ಶೌರ್ಯ ಯಾತ್ರೆ ನಡೆದಿದ್ದು, ಈ ವೇಳೆ ಸುರತ್ಕಲ್ ಫಾಝಿಲ್ ಹತ್ಯೆಯ ರೂವಾರಿ ತಾವೇ ಎಂದು ಭಜರಂಗದಳದ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಬಹಿರಂಗ ಹೇಳಿಕೆ ನೀಡಿದ್ದರು. ಇದೀಗ ಶರಣ್ ಪಂಪ್ ವೆಲ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಫಾಝಿಲ್ ತಂದೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ನೀಡುವಂತೆ ಫಾಝಿಲ್ ತಂದೆಗೆ ಸೂಚನೆ ನೀಡಿದ್ದಾರೆ. ಅಲ್ಲದೆ ಪ್ರಕರಣದ ಬಗ್ಗೆ ಕಾನೂನು ಸಲಹೆ ಪಡೆದು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಪ್ರಚೋಧನಕಾರಿ ಹೇಳಿಕೆ ನೀಡಿದ ಫಾಝಿಲ್ ತಂದೆ ದೂರು ನೀಡಿದ ಫಾಝಿಲ್ ತಂದೆ ಉಮರ್ ಫಾರೂಕ್ ಮಾತನಾಡಿ, “ಶರಣ್ ಪಂಪ್ ವೆಲ್ ತನ್ನ ಪುತ್ರನ ಹತ್ಯೆಯನ್ನು ಸಂಭ್ರಮಿಸಿದ್ದಾನೆ. ಎಂಟು ಮಂದಿ ಓರ್ವನನ್ನು ಹತ್ಯೆ ಮಾಡಿದ್ದಾರೆ. ಅದು ನಿಜವಾದ ಶೌರ್ಯ ಅಲ್ಲ, ಹೇಡಿತನವಾಗಿದೆ. ಶರಣ್ ಪಂಪ್ ವೆಲ್‌ಗೆ ತಾಕತ್ ಇದ್ದಲ್ಲಿ ನಾನು ಒಬ್ಬನೇ ಬರುತ್ತೇನೆ. ಆಗ ನನ್ನೊಂದಿಗೆ ಕಾದಾಡಲಿ, ನಾನು ನೋಡಿಕೊಳ್ಳುತ್ತೇನೆ. ಹಿಂದೂ ಬೇರೆ, ಹಿಂದುತ್ವ ಬೇರೆ. ಹಿಂದೂಗಳು ಒಳ್ಳೆಯವರು. ಆದರೆ ಹಿಂದುತ್ವದಲ್ಲಿ ಇರುವವರು ಹಣ ತೆಗೆದುಕೊಂಡು ಕೃತ್ಯ ಮಾಡುವವರಾಗಿದ್ದಾರೆ. ಈ ಬಗ್ಗೆ ಎಡಿಜಿಪಿಗೂ ಮನವಿ ಮಾಡಿದ್ದೇನೆ. ಪೊಲೀಸರು ಶರಣ್ ಪಂಪ್ ವೆಲ್ ವಿರುದ್ಧ ಸುಮೋಟೋ ಕೇಸ್ ದಾಖಲಿಸಬಹುದಿತ್ತು,” ಎಂದು ಹೇಳಿದರು.