ಡೈಲಿ ವಾರ್ತೆ:07 ಫೆಬ್ರವರಿ 2023
ಕೆದೂರು ಗ್ರಾಮ ಪಂಚಾಯತ್ ಪಿಡಿಓ ಕರ್ತವ್ಯಕ್ಕೆ ಅಡ್ಡಿ: ದೂರು ದಾಖಲು
ಕೋಟ: ಕೆದೂರು ಗ್ರಾಮ ಪಂಚಾಯತ್ ಅಧೀನದ ಅಂಗಡಿ ಕೋಣೆಯಲ್ಲಿನ ಏಲಂ ಆಗಿರುವ ಚರ ಸ್ವತ್ತುಗಳನ್ನು ಬಿಡ್ದುದಾರರಿಗೆ ಅಧಿಕೃತವಾಗಿ ಹಸ್ತಾಂತರಿಸಲು ಅಡ್ಡಿಪಡಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಹಲ್ಲೆ ನಡೆಸಿ, ಸರ್ಕಾರಿ ಕೆಲಸ ನಿರ್ವಹಿಸಲು ತೊಂದರೆಯೊಡ್ಡಿದ ಪ್ರಕರಣ ವರದಿಯಾಗಿದೆ.
ಘಟನೆಯ ಬಗ್ಗೆ ಕೆದೂರು ಗ್ರಾಮ ಪಂಚಾಯತ್ ಪ್ರಭಾರ ಅಭಿವೃದ್ಧಿ ಅಧಿಕಾರಿ ಪ್ರಸಾದ ಎಂಬವರು ಕೋಟ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿ ವಿವರಿಸಲಾದಂತೆ ಪ್ರಕರಣದ ವಿವರ ಹೀಗಿದೆ : ಪಂಚಾಯತ್ ಅಧೀನದ ಅಂಗಡಿ ಕೋಣೆಯಲ್ಲಿನ ಚರ ಸ್ವತ್ತುಗಳನ್ನು ಫೆ. 4ರಂದು ಬಹಿರಂಗ ಏಲಂ ಮಾಡಲಾಗಿತ್ತು. ಕೆದೂರು ಸೀತಾರಾಮ ಶೆಟ್ಟಿ ಎಂಬವರು ಏಲಂ ನಲ್ಲಿ ಚರ ಸ್ವತ್ತುಗಳನ್ನು ಬಿಡ್ ಮೂಲಕ 51 ಸಾವಿರ ರೂ. ಗೆ ಕೊಂಡುಕೊಂಡಿದ್ದರು. ಫೆ. 6 ರಂದು ಬೆಳಿಗ್ಗೆ ಪ್ರಸಾದ ಅವರು ಏಲಂ ಆದ ಚರ ಸ್ವತ್ತುಗಳನ್ನು ಲಿಸ್ಟ್ ಮಾಡಿ, ಪಂಚಾಯತ್ ಸಿಬಂದಿಗಳಾದ ಮಾಧವ, ಸೀತಾರಾಮ ಮತ್ತು ಪಂಚಾಯತ್ ಸದಸ್ಯರೊಂದಿಗೆ ಸೇರಿ ಬಿಡ್ಡುದಾರ ಕೆದೂರು ಸೀತಾರಾಮ ಶೆಟ್ಟಿಯವರಿಗೆ ಹಸ್ತಾಂತರಿಸುವಾಗ ಆರೋಪಿ ನಿವೃತ್ತ ಶಿಕ್ಷಣಾಧಿಕಾರಿ ಕೆದೂರು ಸೀತಾರಾಮ ಶೆಟ್ಟಿ ಎಂಬವರು ಏಕಾಂಕಿ ಅಂಗಡಿಯೊಳಗೆ ನುಗ್ಗಿ, ಪ್ರಸಾದರನ್ನು ದೂಡಿಹಾಕಿ, ಏಕವಚನದಲ್ಲಿ ಅವಾಚ್ಯವಾಗಿ ನಿಂದಿಸಿ, ನಾನು ಎಲ್ಲಾ ಸ್ವತ್ತುಗಳನ್ನೂ ತೆಗೆದುಕೊಂಡು ಹೋಗುತ್ತೇನೆ, ನೀನು ಏನು ಮಾಡುತ್ತೀಯಾ ಎಂದು ದಾಂಧಲೆ ಮಾಡಿ, ಕೆಲವು ಚರ ಸ್ವತ್ತುಗಳನ್ನು ಬಲಾತ್ಕಾರವಾಗಿ ತೆಗೆದುಕೊಂಡು ಹೋಗಿರುತ್ತಾರೆ ಎನ್ನಲಾಗಿದೆ.
ಹಲ್ಲೆಗೊಳಗಾದ ಪ್ರಭಾರ ಅಭಿವೃದ್ಧಿ ಅಧಿಕಾರಿ ಪ್ರಸಾದ ಘಟನೆಯ ಬಗ್ಗೆ ಕೋಟ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.