ಡೈಲಿ ವಾರ್ತೆ:08 ಫೆಬ್ರವರಿ 2023

6,000 ಮಂದಿ ಭೂಸಮಾಧಿ: ಟರ್ಕಿ, ಸಿರಿಯಾದಲ್ಲಿ ಮತ್ತೆ ಮತ್ತೆ ಭೂಕಂಪ

ಇಸ್ತಾಂಬುಲ್‌: ಭೂ ಕಂಪದಿಂದ ಜರ್ಝರಿತವಾಗಿರುವ ಟರ್ಕಿ ಮತ್ತು ಸಿರಿಯಾ ದೇಶಗಳಿಗೆ ಭಾರತ ಸಹಾಯ ಹಸ್ತ ಚಾಚಿದ್ದು, ಭಾರತೀಯ ವಾಯುಸೇನೆಯ ನಾಲ್ಕು ವಿಮಾನಗಳಲ್ಲಿ ಸಂಚಾರಿ ಆಸ್ಪತ್ರೆ, ವೈದ್ಯಕೀಯ ಸಿಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡದ ಸಿಬಂದಿ ತೆರಳಿ ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

ಟರ್ಕಿ ಮತ್ತು ಸಿರಿಯಾದಲ್ಲಿ ಇದುವರೆಗೆ ನಾಲ್ಕು ಪ್ರಬಲ ಭೂಕಂಪಗಳು ಮತ್ತು ಹಲವು ಪಶ್ಚಾತ್‌ ಕಂಪನಗಳಾಗಿವೆ. ಮಂಗಳವಾರವೂ ಒಂದು ಬಾರಿ ಭೂಮಿ ಕಂಪಿಸಿದ್ದು, ಜನರು ಸಾವಿನ ಭೀತಿಯಿಂದಲೇ ದಿನ ದೂಡುತ್ತಿದ್ದಾರೆ. ಟರ್ಕಿ ಮತ್ತು ಸಿರಿಯಾ ಸೇರಿ ಈವರೆಗೆ 6,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಜಗತ್ತಿನ ನಾನಾ ದೇಶಗಳ ರಕ್ಷಣ ತಂಡಗಳು ಟರ್ಕಿ ಮತ್ತು ಸಿರಿಯಾ ತಲುಪಿವೆ. ಟರ್ಕಿಯ ವಿಪತ್ತು ನಿರ್ವಹಣ ಮಂಡಳಿಯ ಪ್ರಕಾರ ವಿವಿಧ ದೇಶಗಳ 24,400 ತುರ್ತು ಸಿಬಂದಿ ರಕ್ಷಣೆಯಲ್ಲಿ ತೊಡಗಿದ್ದಾರೆ.

ಟರ್ಕಿಯಲ್ಲಿ ಒಟ್ಟು 6 ಸಾವಿರಕ್ಕೂ ಅಧಿಕ ಕಟ್ಟಡಗಳು ಧರಾಶಾಯಿಯಾಗಿವೆ. ಈ ಮಧ್ಯೆ ಗಾಯದ ಮೇಲೆ ಉಪ್ಪು ಸುರಿದಂತೆ ರಕ್ಷಣ ಕಾರ್ಯಾಚರಣೆಗೆ ತೀವ್ರ ಚಳಿ ಅಡ್ಡಿ ಮಾಡುತ್ತಿದೆ. ಹಿಮ ಮಳೆ ಸುರಿಯುತ್ತಿದ್ದು, ಕಟ್ಟಡಗಳ ಅಡಿಯಲ್ಲಿ ಸಿಲುಕಿರುವವರನ್ನು ಹೊರತೆಗೆಯುವುದೇ ಹರಸಾಹಸವಾಗಿದೆ. ಆಗಾಗ್ಗೆ ಉಂಟಾಗುತ್ತಿರುವ ಪಶ್ಚಾತ್‌ ಕಂಪನಗಳು ಕೂಡ ಅಡ್ಡಿಯಾಗಿವೆ.

ಇದುವರೆಗೆ 10 ಪ್ರಾಂತಗಳಲ್ಲಿ 7,800 ಮಂದಿಯನ್ನು ರಕ್ಷಿಸಲಾಗಿದ್ದು, ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈ ಎಲ್ಲ 10 ಪ್ರಾಂತಗಳಲ್ಲಿಯೂ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಕಟ್ಟಡಗಳ ಕೆಳಗೆ ಸಿಲುಕಿರುವ ಕುಟುಂಬಸ್ಥರನ್ನು ಬದುಕಿಸಲು ಜನರು ಒದ್ದಾಡುತ್ತಿದ್ದಾರೆ. ನುರ್ಗುಲ್‌ ಅಟಾಯ್‌ ಎಂಬಾಕೆಯ ಮನೆ ಕುಸಿದು ಬಿದ್ದಿದ್ದು, ಅದರಡಿ ಅವರ ತಾಯಿ ಸಿಲುಕಿದ್ದಾರೆ. ಆಕೆಯ ರೋದನ ಕೇಳುತ್ತಿದೆ, ಆದರೆ ರಕ್ಷಣೆ ಮಾಡಲಾಗುತ್ತಿಲ್ಲ ಎಂದು ಅಟಾಯ್‌ ನೋವು ತೋಡಿಕೊಂಡಿದ್ದಾರೆ.

ಸಿರಿಯಾದಲ್ಲೂ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಅಲ್ಲಿ ಸುಮಾರು 800 ಮಂದಿ ಅಸುನೀಗಿದ್ದು, 2,200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಲ್ಲಿಯೂ ಸಾವಿನ ಸಂಖ್ಯೆ ಗಣನೀಯವಾಗಿ ಏರಬಹುದು ಎಂದು ಹೇಳಲಾಗುತ್ತಿದೆ.