ಡೈಲಿ ವಾರ್ತೆ:09 ಫೆಬ್ರವರಿ 2023
ಪತ್ನಿಯ ಮೃತದೇಹ ಹೆಗಲ ಮೇಲೆ ಹೊತ್ತು ನಡೆದ ವ್ಯಕ್ತಿ; ಮಾನವೀಯತೆ ಮೆರೆದ ಪೊಲೀಸರು
ಭುವನೇಶ್ವರ: ನೆರೆಯ ಆಂಧ್ರಪ್ರದೇಶದ ಆಸ್ಪತ್ರೆಗೆ ಹೋಗಿ ಹಿಂದಿರುಗುವಾಗ ಹೆಂಡತಿ ದಾರಿಯಲ್ಲೇ ರಿಕ್ಷಾದಲ್ಲಿ ಮೃತಪಟ್ಟ ಬಳಿಕ ವ್ಯಕ್ತಿಯೊಬ್ಬರು ಆಕೆಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಹಲವಾರು ಕಿಲೋಮೀಟರ್ ನಡೆದ ಘಟನೆ ಒಡಿಶಾದ ಕೋರಪಟ್ ಜಿಲ್ಲೆಯಲ್ಲಿ ನಡೆದಿದೆ.
ಪೊತ್ತಂಗಿ ಬ್ಲಾಕಿನ ಸೊರದಾ ಗ್ರಾಮದ ಸಾಮುಲು ಪಂಗಿ ಎಂಬಾತ ಪತ್ನಿಯ ಮೃತದೇಹವನ್ನು ಹೊತ್ತು ನಡೆದ ವ್ಯಕ್ತಿ. ದಾರಿಯಲ್ಲಿ ಇದನ್ನು ಗಮನಿಸಿದ ಪೊಲೀಸರು ಮೃತ ದೇಹವನ್ನು ಸಾಗಿಸಲು ಆಂಬುಲೆನ್ಸ್ ನ ವ್ಯವಸ್ಥೆಗೊಳಿಸಿದ್ದಾರೆ.
ಅನಾರೋಗ್ಯಪೀಡಿತ ಪತ್ನಿಯನ್ನು ವಿಶಾಖಪಟ್ಟಣ ಜಿಲ್ಲೆಯ ಸಂಗಿವಲಸದಲ್ಲಿ ಆಸ್ಪತ್ರೆಗೆ ಸೇರಿಸಿದ್ದೆ. ಆದರೆ ನಿನ್ನ ಹೆಂಡತಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಮನೆಗೆ ಕರೆದುಕೊಂಡು ಹೋಗು ಎಂದು ವೈದ್ಯರು ಹೇಳಿದ್ದರು. ನನ್ನ ಮನೆ ಅಲ್ಲಿಂದ 100 ಕಿಲೋಮೀಟರ್ ನಷ್ಟು ದೂರದಲ್ಲಿದೆ. ಒಂದು ರಿಕ್ಷಾ ಹಿಡಿದು ಬರುತ್ತಿದ್ದಾಗ ವಿಜಯನಗರಂ ಬಳಿ ಪತ್ನಿ ತೀರಿಕೊಂಡಳು. ಆಗ ಆಟೋದವನು ಶವ ಕೊಂಡುಹೋಗಲು ಸಾಧ್ಯವಿಲ್ಲ ಎಂದು ಚೆಲ್ಲೂರು ರಿಂಗ್ ರಸ್ತೆಯಲ್ಲಿ ಶವ ಇಳಿಸಿ ಹೋಗಿ ಬಿಟ್ಟ ಎಂದು ಸಾಮುಲು ಪಂಗಿ ಹೇಳಿದರು.
ಇನ್ನೂ 80 ಕಿಲೋಮೀಟರ್ ದೂರವಿದ್ದರೂ ಬೇರೆ ದಾರಿಯಿಲ್ಲದೆ ಪಂಗಿ ತನ್ನ ಹೆಂಡತಿಯ ಶವ ಹೊತ್ತು ನಡೆಯತೊಡಗಿದರು. ಸ್ಥಳೀಯ ಜನರು ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಗ್ರಾಮೀಣ ಸರ್ಕಲ್ ಇನ್ಸ್ ಪೆಕ್ಟರ್ ಟಿ. ವಿ. ತಿರುಪತಿ ರಾವ್ ಮತ್ತು ಗಂತ್ಯಡದ ಸಬ್ ಇನ್ಸ್ ಪೆಕ್ಟರ್ ಕಿರಣ್ ಕುಮಾರ್ ಅವರು ಪಂಗಿಯನ್ನು ತಡೆದು ವಿಚಾರಿಸಿದರು.
ಮೊದಲಿಗೆ ಒಡಿಯಾ ಭಾಷೆಯಲ್ಲಿ ಪಂಗಿ ಏನು ಹೇಳುತ್ತಿದ್ದಾನೆಂದು ಪೊಲೀಸರಿಗೆ ತಿಳಿಯಲಿಲ್ಲ. ಆಮೇಲೆ ಎರಡೂ ಭಾಷೆ ಬಲ್ಲ ವ್ಯಕ್ತಿಯೊಬ್ಬ ಅವರಿಗೆ ವಿಷಯ ತಿಳಿಸಿದ್ದಾನೆ.
ವಿಷಯದ ಗಂಭೀರತೆಯನ್ನು ಅರಿತ ಪೊಲೀಸರು ಒಂದು ಆಂಬುಲೆನ್ಸ್ ನ ವ್ಯವಸ್ಥೆ ಮಾಡಿ ಪಂಗಿ ಮತ್ತು ಆತನ ಹೆಂಡತಿಯ ಮೃತದೇಹವನ್ನು ಅವರ ಊರಿಗೆ ರವಾನಿಸಿ ಕೊಟ್ಟರು.
ಪಂಗಿ ಪೋಲೀಸರಿಗೆ ಧನ್ಯವಾದ ಹೇಳಿದರೆ, ಸರಿಯಾದ ಸಮಯಕ್ಕೆ ನೆರವು ನೀಡಿದ್ದಕ್ಕೆ ಸ್ಥಳೀಯರು ಕೂಡ ಪೋಲೀಸರಿಗೆ ಧನ್ಯವಾದ ತಿಳಿಸಿದರು.
2016ರಲ್ಲಿ ಆಸ್ಪತ್ರೆಯವರು ಹೆಣ ಹೊರಗಿಟ್ಟು ಆಂಬುಲೆನ್ಸನ್ನು ಸಹ ಹಣವಿಲ್ಲವೆಂದ ಒದಗಿಸದ ಕಾರಣಕ್ಕೆ ಒಡಿಶಾದ ಭವಾನಿಪಟ್ಣದ ದಾನಾ ಮಜಿ ಹೆಂಡತಿಯ ಶವವನ್ನು 12 ಕಿಲೋಮೀಟರ್ ಹೊತ್ತು ನಡೆದುದನ್ನು ಇಲ್ಲಿ ಸ್ಮರಿಸಬಹುದು.
ಇವು ಅಂತಾರಾಷ್ಟ್ರೀಯವಾಗಿ ಸುದ್ದಿಯಾಗಿರುವುದರಿಂದ ಒಡಿಶಾ ಸರಕಾರಕ್ಕೊಂದು ಕಪ್ಪು ಚುಕ್ಕಿಯಾಗಿದೆ ಎಂದು ಹೇಳಲಾಗುತ್ತಿದೆ.