



ಡೈಲಿ ವಾರ್ತೆ:09 ಫೆಬ್ರವರಿ 2023


ಸರಣಿ ಅಪಘಾತ: ಟ್ರ್ಯಾಕ್ಟರ್, ಲಾರಿಗೆ ಡಿಕ್ಕಿ ಹೊಡೆದ ಕಾರು, ಇಬ್ಬರು ಯುವಕರು ಮೃತ್ಯು ಓರ್ವ ಗಂಭೀರ!
ದಾವಣಗೆರೆ: ದಾವಣಗೆರೆಯಲ್ಲಿ ಮದುವೆ ಮುಗಿಸಿಕೊಂಡು ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ಸಂಭವಿಸಿ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟ ಘಟನೆ ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿ ಬಳಿ ಬುಧವಾರ ತಡರಾತ್ರಿ ಸಂಭವಿಸಿದೆ.
ಬಿಲ್ಲಹಳ್ಳಿ ಮಂಜುನಾಥ (24), ಪಾಂಡೊಮಟ್ಟಿ ಅಮೃತ್ (23) ಸಾವನ್ನಪ್ಪಿದ ಯುವಕರು ಎಂದು ತಿಳಿದು ಬಂದಿದೆ. ಓರ್ವನ ಸ್ಥಿತಿ ಗಂಭೀರವಾಗಿದ್ದು, ದಾವಣಗೆರೆ ಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಟ್ರ್ಯಾಕ್ಟರ್ ಹಾಗೂ ಲಾರಿಗೆ ಏಕಕಾಲದಲ್ಲಿ ಕಾರು ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವಕರು ಸಾವನಪ್ಪಿದ್ದಾರೆ.
ಮೊದಲು ಎದುರಿಗೆ ಬರುತ್ತಿದ್ದ ಟ್ರಾಕ್ಟರ್ಗೆ ಕಾರು ಡಿಕ್ಕಿ ಹೊಡೆದಿದ್ದು, ಬಳಿಕ ಲಾರಿಗೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ಜಖಂಗೊಂಡಿದೆ. ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.