ಡೈಲಿ ವಾರ್ತೆ:12 ಫೆಬ್ರವರಿ 2023
ದಕ್ಷಿಣ ಕನ್ನಡ : ಪಯಸ್ವಿನಿ ನದಿಯಲ್ಲಿ ಮುಳುಗಿ ಪುತ್ತೂರಿನ ಇಬ್ಬರು ಯುವಕರು ಸಾವು
ಸುಳ್ಯ : ಈಜಲು ನದಿಗೆ ಇಳಿದ ವೇಳೆ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ದೊಡ್ಡೇರಿ ಸಮೀಪದ ಪಯಸ್ವಿನಿ ನದಿಯಲ್ಲಿ ಶನಿವಾರ ಸಂಭವಿಸಿದೆ.
ಪುತ್ತೂರು ತಾಲೂಕಿನ ಕೌಡಿಚ್ಚಾರು ಸಮೀಪದ ಅರಿಯಡ್ಕದ ದೇರ್ಲ ನಾರಾಯಣ ಪಾಟಾಳಿ ಅವರ ಪುತ್ರ ಜಿತೇಶ್ (19) ಮತ್ತು ಪಡುವನ್ನೂರು ಗ್ರಾಮದ ಅಂಬಟೆಮೂಲೆಯ ಕೃಷ್ಣ ನಾಯ್ಕರ ಪುತ್ರ ಪ್ರವೀಣ್ (19) ಮೃತ ಯುವಕರು.
ಪುತ್ತೂರಿನ ಕೌಡಿಚ್ಚಾರ್‌ಸುತ್ತಮುತ್ತಲ 6 ಮಂದಿ ಯುವಕರು ಜತೆಯಾಗಿ ಸುಳ್ಯದ ಪಯಸ್ವಿನಿ ನದಿಗೆ ಈಜಲು ಶನಿವಾರ ಬಂದಿದ್ದರು. ಯುವಕರಲ್ಲಿ ಒಬ್ಬ ನೀರಿಗಿಳಿದನು. ನೀರಿಗಿಳಿದ ಸ್ಥಳ ಪ್ರಪಾತವಾಗಿದ್ದರಿಂದ ಆತ ನೀರಿನಲ್ಲಿ ಮುಳುಗುತ್ತಿದ್ದಂತೆ ಆತನನ್ನು ರಕ್ಷಿಸಲು ಹೋದ ಇನ್ನೊರ್ವ ಸ್ನೇಹಿತನೂ ನೀರು ಪಾಲಾಗಿದ್ದಾನೆ.
ಸಂತೋಷ್ ಅಂಬಟೆಮೂಲೆ, ಸತ್ಯಾನಂದ ಚಂದುಕೂಡ್ಲು, ಯುವರಾಜ ಅಂಬಟೆಮೂಲೆ, ನಿತೀಶ್ ಬಳ್ಳಿ ಕಾನ, ಜಿತೇಶ್ ಮತ್ತು ಪ್ರವೀಣ್ ಜತೆಯಾಗಿ ಸುಳ್ಯಕ್ಕೆ ಬಂದಿದ್ದರು. ಸುಳ್ಯದ ಓಡಬಾಯಿ ಬಳಿಯ ತೂಗುಸೇತುವೆ ಸಮೀಪ ಕಾರನ್ನು ನಿಲ್ಲಿಸಿ ಸೇತುವೆಯಲ್ಲಿ ನಡೆದು ದೊಡ್ಡೇರಿಯ ಸಂಬಂಧಿಕರ ಮನೆಗೆ ಹೋಗಿ ಬಂದು ಬಳಿಕ ಪಯಸ್ವಿನಿ ನದಿಗೆ ಇಳಿದಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಸ್ಥಳೀಯ ಈಜುಗಾರ ಯುವಕರು ಕಾರ್ಯಾಚರಣೆ ನಡೆಸಿ ನೀರಲ್ಲಿ ಮುಳುಗಿದ್ದ ಯುವಕರ ಶವವನ್ನು ಮೇಲೆತ್ತಿದ್ದಾರೆ.
ಮೃತ ಯುವಕರು ಹುಲ್ಲು ತೆಗೆಯುವ ಕೆಲಸ ಮಾಡುತ್ತಿದ್ದರು. ಶನಿವಾರ ಪುತ್ತೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಕಾರ್ಯಕ್ರಮ ಇದ್ದ ಕಾರಣ ಕೆಲಸಕ್ಕೆ ರಜೆ ಮಾಡಿ ಸುತ್ತಾಡಲು ಹೊರಟಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.