ಡೈಲಿ ವಾರ್ತೆ:13 ಫೆಬ್ರವರಿ 2023
ಕೊಡಗು: ಹುಲಿ ದಾಳಿಗೆ ಇಬ್ಬರು ಬಲಿ, 12ವರ್ಷದ ಬಾಲಕ ಹಾಗೂ ಮತ್ತೊಬ್ಬ ಕಾರ್ಮಿಕ ಸಾವು; ಹುಲಿ ಸೆರೆಗೆ ಸಿದ್ಧತೆ
ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಹುಲಿ ದಾಳಿಗೆ ಸಿಲುಕಿ ಸೋಮವಾರ ಬೆಳಿಗ್ಗೆ ಕೇರಳ ಗಡಿಭಾಗ ಪಲ್ಲೇರಿ ಗ್ರಾಮದಲ್ಲಿ ಕೃಷಿ ಕಾರ್ಮಿಕ ರಾಜು (75) ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಹುಲಿ ದಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.
ಸೋಮವಾರ ಬೆಳಿಗ್ಗೆ ತನ್ನ ಮನೆಯಿಂದ ಹೊರ ಬಂದ ರಾಜು ಅವರ ಮೇಲೆ ಕಾಫಿ ತೋಟದಲ್ಲಿ ಅಡಗಿದ್ದ ಹುಲಿ ದಿಢೀರನೇ ದಾಳಿ ನಡೆಸಿ, ತಲೆ ಹಾಗೂ ಕುತ್ತಿಗೆ ಭಾಗವನ್ನು ತೀವ್ರವಾಗಿ ಗಾಯಗೊಳಿಸಿದೆ. ಇದರಿಂದ ರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತೋಟದಲ್ಲಿ ಆಟವಾಡುತ್ತಿದ್ದಾಗ ಹುಲಿ ದಾಳಿ 12 ವರ್ಷದ ಬಾಲಕ ಬಲಿ: ಕೊಡಗು ಜಿಲ್ಲೆಯ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟ ಗ್ರಾಮದ ಪಲ್ಲೇರಿ ಎಂಬಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕನನ್ನು ಹುಲಿ ಕೊಂದು ಹಾಕಿರುವ ಘಟನೆ ನಡೆದಿದೆ.
ಕುಟ್ಟ ಗ್ರಾಮದ ಪಾಲ್ಲೇರಿ ಎಂಬಲ್ಲಿ ಹುಲಿ ದಾಳಿಗೆ ಬಲಿಯಾದ ಬಾಲಕ ಚೇತನ್ (12) ಎಂದು ಗುರುತಿಸಲಾಗಿದೆ. ಹುಲಿ ದಾಳಿಯಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೊಡಗು ಜಿಲ್ಲೆಯ ಕೆ.ಬಾಡಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೂರಿಕಾಡು ನೆಲ್ಲಿರ ಪೂಣಚ್ಚ ಎಂಬುವವರ ಮನೆಯಲ್ಲಿ ಕೆಲಸ ಮಾಡಲು ಬಂದಿದ್ದ ಪಂಚವಳ್ಳಿ ಮೂಲದ ಕಾರ್ಮಿಕ ಹುಡುಗ ಆಗಿದ್ದಾನೆ. ಇವನು ತೋಟದ ಒಳಗೆ ಆಟ ಆಡುತ್ತಿದ್ದ ವೇಳೆ ಬಾಲಕನ ಮೇಲೆ ಹುಲಿ ದಾಳಿ ಮಾಡಿದೆ.
ಹುಲಿಯನ್ನು ಸೆರೆ ಹಿಡಿಯಲು ಬೋನು ಅಳವಡಿಕೆ ಮಾಡಲಾಗಿದೆ.