ಡೈಲಿ ವಾರ್ತೆ:13 ಫೆಬ್ರವರಿ 2023
ಮನುಷ್ಯನಲ್ಲಿರುವ 11 ಇಂದ್ರಿಯಗಳಲ್ಲಿ ಮನಸ್ಸು ಎನ್ನುವ ಒಂದು ಇಂದ್ರಿಯ ಸರಿ ಇದ್ದಲ್ಲಿ ಎಲ್ಲಾ ಇಂದ್ರಿಯಗಳು ಸಕ್ರಿಯವಾಗಿ ಕೆಲಸ ಮಾಡುತ್ತವೆ:ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿ
ಬ್ರಹ್ಮಾವರ : ಮನುಷ್ಯನಲ್ಲಿರುವ 11 ಇಂದ್ರಿಯಗಳಲ್ಲಿ ಮನಸ್ಸು ಎನ್ನುವ ಒಂದು ಇಂದ್ರಿಯ ಸರಿ ಇದ್ದಲ್ಲಿ ಎಲ್ಲಾ ಇಂದ್ರಿಯಗಳು ಸಕ್ರಿಯವಾಗಿ ಕೆಲಸ ಮಾಡುತ್ತವೆ. ಮನುಷ್ಯನ ಮನಸ್ಸೆಂಬ ಯೋಚನಾ ಲಹರಿ ವಿಶಾಲವಾಗಿರಬೇಕು ಎಂದು ಉಡುಪಿ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ಸ್ವಾಮೀಜಿ ಹೇಳಿದರು.
ಚೇರ್ಕಾಡಿ ಸೂರೆಬೆಟ್ಟು ಸಿದ್ಧಿವಿನಾಯಕ ದೇವರ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭ ಭಾನುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಹಿಂದೂ ಸನಾತನ ಪರಂಪರೆಯಲ್ಲಿ ದೇವತಾ ಆರಾಧನೆ ಪದ್ಧತಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಅಲ್ಲದೇ ಇಷ್ಟಾರ್ಥಗಳನ್ನು ನೆರವೇರಿಸುವ ಮತ್ತು ಮಾಡುವ ಕಾರ್ಯದಲ್ಲಿ ಯಾವುದೇ ವಿಘ್ನಗಳು ಬಾರದೇ ಇರಲಿ ಎಂದು ಗಣಪತಿಯನ್ನು ನಾವು ಮೊದಲು ಸ್ತುತಿಸುತ್ತೇವೆ. ಬ್ರಹ್ಮಕಲಶ ಮಾಡುವುದರಿಂದ ಭಕ್ತರ ಮನಸ್ಸು ಶುದ್ಧಿಗೊಂಡು ಗ್ರಾಮದ ಅಭಿವೃದ್ಧಿಯೂ ಆಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ಮಾತನಾಡಿ ದೇವರ ನಂಬಿಕೆಯೊಂದಿಗೆ ಸ್ವಪ್ರಯತ್ನವೂ ಅಗತ್ಯ ಎಂದರು.
ರೋಣ ವಿಧಾನಸಭಾ ಕ್ಷೇತ್ರ ಶಾಸಕ ಕಳಕಪ್ಪ ಬಂಡಿ ಮಾತನಾಡಿ ಹಿಂದೆ ಸನಾತನ ಹಿಂದೂ ಧರ್ಮವನ್ನು ನಾಶ ಪಡಿಸಲು ಹಲವುರು ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿಲ್ಲ. ಹಿಂದೂ ಧರ್ಮ ಇನ್ನೂ ಸದೃಢವಾಗಿದೆ ಎಂದು ಹೇಳಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವಿರಾಜ ವಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಕೆ.ರಘುಪತಿ ಭಟ್, ಹುಬ್ಬಳ್ಳಿ ಧಾರವಾಡದ ಬಂಟರ ಸಂಘದ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಉದ್ಯಮಿ ಮಂಜುನಾಥ ಹೆಗ್ಡೆ, ಚೇರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಖಾ ಭಟ್, ಕನ್ನಾರು ದುರ್ಗಾ ಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ಧನಂಜಯ ಅಮೀನ್, ನೀಲಾವರ ದೇವಸ್ಥಾನದ ಮೊಕ್ತೇಸರ ರಘುರಾಮ ಮಧ್ಯಸ್ಥ, ಬೆಂಗಳೂರಿನ ತೆರಿಗೆ ಸಲಹೆಗಾರ ಆರೂರು ನಾರಾಯಣ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ಸುಧಾಕರ ಶೆಟ್ಟಿ, ಹೈದರಾಬಾದ್‌ನ ವಿಜಯ ಶೇಠ್, ಗುಪ್ತಚರ ಇಲಾಖೆಯ ನಿವೃತ್ತ ಅಧಿಕಾರಿ ಮನೋಹರ್ ರಾಜು, ಸಮಿತಿಯ ಕಾರ್ಯಾಧ್ಯಕ್ಷ ವಿಜಯ ಹೆಗ್ಡೆ ಇದ್ದರು.
ಇದೇ ಸಂದರ್ಭ ದಾನಿಗಳನ್ನು ಗೌರವಿಸಲಾಯಿತು.
ದೇವಸ್ಥಾದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಶ್ರೀಧರ ಶೆಟ್ಟಿ ವಿ ಶೆಟ್ಟಿ ಆರೂರು ಸ್ವಾಗತಿಸಿದರು. ಬ್ರಹ್ಮಕಲಶೋತ್ಸವದ ಸಂಚಾಲಕ ಸುದರ್ಶನ ಸೂರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಸದಸ್ಯ ಹರೀಶ್ ಶೆಟ್ಟಿ ಚೇರ್ಕಾಡಿ ಮತ್ತು ಕಾರ್ಯದರ್ಶಿ ಕನ್ನಾರು ಕಮಲಾಕ್ಷ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.