ಡೈಲಿ ವಾರ್ತೆ:13 ಫೆಬ್ರವರಿ 2023
ದೈವ ಹಾಗೂ ದುಷ್ಟ ಶಕ್ತಿ ನಡುವಿನ ಸಂಘರ್ಷದ ಕಥೆಯೇ ‘ಆರ’; ಗಮನ ಸೆಳೆಯುತ್ತಿದೆ ಚಿತ್ರದ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳು ಎಂಟ್ರಿ ಕೊಡುತ್ತಲೇ ಇದ್ದಾರೆ. ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇದ್ದಾರೆ. ಇಂತಹ ಎಕ್ಸ್‌ಪೆರಿಮೆಂಟ್ ಮಾಡುತ್ತಾ ಹೊಸ ಕನಸುಗಳನ್ನು ಹೊತ್ತು ಹೊಸತಂಡ ವೊಂದು ಅಖಾಡಕ್ಕೆ ಇಳಿದಿದೆ.
ಅಂದ್ಹಾಗೆ ಹೊಸ ಪ್ರತಿಭೆಗಳ ಹೊಸ ಪ್ರಯತ್ನವೇ ‘ಆರ’. ಅಶ್ವಿನ್ ವಿಜಯ ಮೂರ್ತಿ ಆಕ್ಷನ್ ಕಟ್ ಹೇಳಿರುವ ‘ಆರ’ ಚಿತ್ರತಂಡ ಹೊಚ್ಚ ಪೋಸ್ಟರ್ ರಿಲೀಸ್ ಮಾಡಿದ್ದು, ಕುತೂಹಲವನ್ನು ಕೆರಳಿಸುತ್ತಿದೆ.
‘ಆರ’ ಸಿನಿಮಾ ದೈವ ಹಾಗೂ ದುಷ್ಟ ಶಕ್ತಿಯ ಕಥೆ ಹೇಳಲು ಹೊರಟಿರುವ ಸಿನಿಮಾ. ಆಧ್ಯಾತ್ಮ ಹಾಗೂ ಥ್ರಿಲ್ಲರ್ ಸ್ಟೋರಿಯನ್ನು ಹೊಸಬರ ತಂಡ ತೆರೆಮೇಲೆ ತರುವುದಕ್ಕೆ ಮುಂದಾಗಿದೆ. ಈ ಸಿನಿಮಾದ ಹೊಚ್ಚ ಹೊಸ ಪೋಸ್ಟರ್ ನೋಡಿದ್ಮೇಲೆ ಸಿನಿಮಾ ಬಗ್ಗೆ ಕುತೂಹಲ ಮತ್ತಷ್ಟು ದುಪ್ಪಟ್ಟಾಗಿದೆ.
ಆರ’ ಸಿನಿಮಾ ದೈವ ಹಾಗೂ ದುಷ್ಟ ಶಕ್ತಿಗಳ ನಡುವಿನ ಸಂಘರ್ಷದ ಕಥೆ. ಅಂದ್ಹಾಗೆ’ಆರ’ ಅನ್ನೋದು ಒಬ್ಬ ಹುಡುಗನ ಹೆಸರು. ಆತನ ಜರ್ನಿಯನ್ನೇ ಮುಖ್ಯ ವಿಷಯವಾಗಿಟ್ಟುಕೊಂಡು ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ದುಷ್ಟ ಶಕ್ತಿಗಳು, ಹೆಣ್ಣು, ಹೊನ್ನು, ಮಣ್ಣು ರೂಪದಲ್ಲಿ ಎದುರಾಗುವ ಸವಾಲುಗಳನ್ನು ಸ್ವೀಕರಿಸಿ ತನ್ನ ತಾತನಿಂದ ಬಳುವಳಿಯಾಗಿ ಬಂದ ಕಾಡನ್ನು ಉಳಿಸಿಕೊಳ್ಳುತ್ತಾನಾ? ಇಲ್ವಾ? ಅನ್ನೋದು ‘ಆರ’ನ ಜರ್ನಿ. ಅಶ್ವಿನ್ ವಿಜಯ ಮೂರ್ತಿ ‘ಆರ’ ಸಿನಿಮಾದ ನಿರ್ದೇಶಕ. ಅಶ್ವಿನ್ ನಿರ್ದೇಶಕನಷ್ಟೇ ಅಲ್ಲ. ದಿನೇಶ್ ಬಾಬು ನಿರ್ದೇಶನದ ‘ನನಗಿಷ್ಟ’ ಸಿನಿಮಾದಲ್ಲೂ ನಟಿಸಿದ್ದಾರೆ. ‘ಕಿನ್ನರಿ’, ‘ಸೇವಂತಿ ಸೇವಂತಿ’ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಆದರೆ, ‘ಆರ’ ಅಶ್ವಿನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ. ಸದ್ಯ ಸಿನಿಮಾ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿದೆ. ಏಪ್ರಿಲ್ ಅಥವಾ ಮೇನಲ್ಲಿ ಈ ಸಿನಿಮಾ ರಿಲೀಸ್ ಆಗಬಹುದು.
ರೋಹಿತ್ ಹಾಗೂ ದೀಪಿಕಾ ಆರಾಧ್ಯ ಸಿನಿಮಾದಲ್ಲಿ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ವಿಶೇಷ ಅಂದ್ರೆ, ಈ ಸಿನಿಮಾದ ಕಥೆ,ಚಿತ್ರಕಥೆ, ಸಂಭಾಷಣೆಯನ್ನು ಹೀರೊ ರೋಹಿತ್ ಅವರೇ ಬರೆದಿದ್ದಾರೆ. ಆನಂದ್ ನೀನಾಸಂ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ರೆ, ಯುವ ಪ್ರತಿಭೆ ಶ್ರೀಹರಿ ಛಾಯಾಗ್ರಾಹಣ, ಗಿರೀಶ್ ಹೊತ್ತೂರ್ ಸಂಗೀತ ನೀಡಿದ್ದಾರೆ.