ಡೈಲಿ ವಾರ್ತೆ:14 ಫೆಬ್ರವರಿ 2023

ಇಂದು ಪ್ರೇಮಿಗಳ ದಿನ: ಶ್ರೀ ರಾಮ ಸೇನೆ ಮುಖ್ಯಸ್ಥ ಮುತಾಲಿಕ ಮತ್ತೆ ಎಚ್ಚರಿಕೆ

ಇಂದು ವ್ಯಾಲೆಂಟೈನ್ಸ್ ಡೇ ಆಚರಿಸಲು ಯುವ ಸಮೂಹ ಸಜ್ಜಾಗಿದೆ. ಸೇಂಟ್ ವ್ಯಾಲೆಂಟೈನ್ ಅವರ ಮರಣ ದಿನದ ನೆನಪಿಗಾಗಿ ಇಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತಿದೆ. ಕ್ರಿ.ಶ. 270 ರಲ್ಲಿ ರೋಮ್ ಸಾಮ್ರಾಜ್ಯ ಆಳುತ್ತಿದ್ದ ರಾಜ 2 ನೇ ಕ್ಲಾಡಿಯಸ್ ಸೈನಿಕರು ಸಂಪೂರ್ಣವಾಗಿ ಯುದ್ಧದಲ್ಲಿ ತೊಡಗಿಸಿಕೊಳ್ಳಬೇಕೆಂಬ ಕಾರಣಕ್ಕೆ ಅವರಿಗೆ ಮದುವೆಯಾಗಲು ಬಿಡುತ್ತಿರಲಿಲ್ಲ . ಆದರೆ ವ್ಯಾಲೆಂಟೈನ್ ಎಂಬ ಸಂತ ರಾಜನಿಗೆ ತಿಳಿಯದಂತೆ ಪ್ರೇಮಿಗಳನ್ನು ಒಂದುಗೂಡಿಸುತ್ತಿದ್ದರು. ಇದು ರಾಜನಿಗೆ ತಿಳಿದು ಫೆ. 14 ರಂದು ಅವರನ್ನು ಸೆರೆಮನೆಗೆ ತಳ್ಳಿದ. ಅಲ್ಲೇ ಸಂತ ಮರಣ ಹೊಂದಿದ್ದರು ಎಂಬ ಕಥೆ ಇದೆ.

ಈ ನಡುವೆ ಪ್ರೇಮಿಗಳ ದಿನಕ್ಕೆ ಮುತಾಲಿಕ್ ಎಚ್ಚರಿಕೆ ರವಾನಿಸಿದ್ದಾರೆ. ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಪಾರ್ಕ್, ಪಾರ್ಲರ್, ಹೋಟೆಲ್ ಮೇಲೆ ಶ್ರೀರಾಮ ಸೇನೆ ನಿಗಾ ಇರಿಸಲಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ಪ್ರೇಮಿಗಳ ದಿನಾಚರಣೆ ವಿರೋಧಿಸುತ್ತ ಬಂದಿದ್ದೇವೆ. ಈ ಬಾರಿ ಪೊಲೀಸರ ಸಹಕಾರದೊಂದಿಗೆ ಈ ಕಾರ್ಯ ನಡೆಯಲಿದೆ. ಪ್ರೇಮಿಗಳ ದಿನಾಚರಣೆ ಹೆಸರಲ್ಲಿ ನಡೆಯುವ ಡ್ರಗ್, ಸೆಕ್ಸ್ ಮಾಫಿಯಾ ತಡೆಯುವುದು ನಮ್ಮ ಉದ್ದೇಶ ಕಾನೂನು ಬದ್ಧವಾಗಿಯೇ ಈ ಕೆಲಸವನ್ನು ಶ್ರೀರಾಮ ಸೇನೆ ಮಾಡುತ್ತದೆ ಎಂದು ಮುತಾಲಿಕ್ ತಿಳಿಸಿದ್ದಾರೆ.