ಡೈಲಿ ವಾರ್ತೆ:15 ಫೆಬ್ರವರಿ 2023
ಭಟ್ಕಳ: ರಸ್ತೆ ಕಾಮಗಾರಿ ವಿಚಾರ, ಗ್ರಾಮಸ್ಥರೊಂದಿಗೆ ಅಸಭ್ಯವಾಗಿ ವರ್ತಿಸಿದ ಶಾಸಕ ಸುನೀಲ ನಾಯ್ಕ!
ಭಟ್ಕಳ: ತಾಲೂಕಿನ ಬೈಲೂರಿನ ಮಾರ್ಕೆಂಡೆಶ್ವರ ಗ್ರಾಮದ ರಸ್ತೆಯನ್ನು ಸಂಪೂರ್ಣ 1.8 ಕಿ.ಮಿ. ತನಕ ಮರು ಡಾಂಬರೀಕರಣ ಮಾಡಿಕೋಡಿ ಎಂದು ಶಾಸಕರ ಬಳಿ ಕೇಳಿದ ಗ್ರಾಮಸ್ಥರೊಂದಿಗೆ ಶಾಸಕ ಸುನೀಲ ನಾಯ್ಕ ಏಕಾಎಕಿ ಸಿಟ್ಟಾಗಿ, ಅಸಭ್ಯವಾಗಿ ವರ್ತಿಸಿದ ಘಟನೆ ಬೈಲೂರು ಮಾರ್ಕಾಂಡೇಶ್ವರದಲ್ಲಿ ಮಂಗಳವಾರ ನಡೆದಿದೆ.
ತಾಲೂಕಿನ ಬೈಲೂರಿನ ಮಾರ್ಕೆಂಡೆಶ್ವರ ರಸ್ತೆಯು ಸಂಪೂರ್ಣ ಹಾಳಾಗಿದ್ದು ಹೊಂಡ ಗುಂಡಿಗಳಿಂದ ಓಡಾಡುವುದಕ್ಕೇ ತೊಂದರೆಯಾಗುತ್ತಿತ್ತು. ಸರಕಾರದ ಅನುದಾನದಲ್ಲಿ ಕೇವಲ 400 ಮೀಟರ್ ರಸ್ತೆ ಮರು ಡಾಂಬರೀಕರಣಕ್ಕೆ 25 ಲಕ್ಷ ರೂಪಾಯಿ ಮಂಜೂರಿಯಾಗಿದ್ದು ಮಂಗಳವಾರ ಅದರ ಗುದ್ದಲಿ ಪೂಜೆಗೆ ಶಾಸಕ ಸುನಿಲ್ ನಾಯ್ಕ ಬೈಲೂರು ಮಾರ್ಕಾಂಡೇಶ್ವರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ತಮಗೆ ಓಡಾಡುವುದಕ್ಕೆ ತೀವ್ರ ತೊಂದರೆಯಾಗುವುದರಿಂದ ಸಂಪೂರ್ಣ 1.8 ಕಿ.ಮಿ. ಮರು ಡಾಂಬರೀಕರಣವಾಗಬೇಕು ಎಂದು ಕೇಳಿದರೆನ್ನಲಾಗಿದೆ.
ಇಲ್ಲವಾದಲ್ಲಿ ಕೇವಲ 400 ಮೀಟರ್ ರಸ್ತೆಯನ್ನು ಮಾಡಿ ನಮಗೆ ಏನು ಪ್ರಯೋಜನ ಎಂದು ಗ್ರಾಮಸ್ಥರು ಕೇಳಿದ್ದೇ ಶಾಸಕರ ಸಿಟ್ಟಿಗೆ ಕಾರಣವಾಯಿತೆನ್ನಲಾಗಿದೆ. ಹಾಗಾದರೆ ನಿನಗೆ ತಾಕತ್ತಿದ್ದರೆ ಈ ಕಾಮಗಾರಿಯನ್ನು ನಿಲ್ಲಿಸು ಎನ್ನುತ್ತಲೇ ಏರು ಧ್ವನಿಯಲ್ಲಿ ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ ಉದ್ಧಟತನದಿಂದ ವರ್ತಿಸಿದರೆನ್ನಲಾಗಿದೆ. ನಾನು ಶಾಸಕ ಇಲ್ಲಿ ಯಾರ ಅಪ್ಪಣೆಯೂ ನನಗೆ ಬೇಡಾ, ರಸ್ತೆ ಮಾಡಬೇಕು ಬಿಡಬೇಕು ಎನ್ನುವುದು ನಾನು ಅರಿತಿದ್ದೇನೆ. 400 ಮೀಟರ್ ರಸ್ತೆ ಮಾತ್ರ ಮರು ಡಾಂಬರೀಕರಣ ಮಾಡುವುದು ಎಂದು ಏರು ಧ್ವನಿಯಲ್ಲಿಯೇ ಆವಾಜ್ ಹಾಕಿದ್ದಾರೆ. ಇಲ್ಲಿ ಯಾರದ್ದೂ ಅಪ್ಪಣೆಯನ್ನು ಕೇಳಿ ನಾನು ಕೆಲಸ ಮಾಡಬೇಕಾಗಿಲ್ಲ ಎಂದು ಗ್ರಾಮಸ್ಥರಿಗೆ ಅವಾಜ್ ಹಾಕಿದ್ದಾರೆನ್ನಲಾಗಿದ್ದು ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು ಭಾರೀ ಸದ್ದು ಮಾಡಿದೆ. ಕೆಲವು ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಮಾಡಿಕೊಡಿ ಎಂದು ಕೋರಿಕೆ ಸಲ್ಲಿಸಿದವರನ್ನು ಅನ್ಯ ಪಕ್ಷದವರು ಎಂದು ಬಿಂಬಿಸುತ್ತಾ ಅವರಿಗೆ ಅವಾಚ್ಯ ಶಬ್ದಗಳನ್ನು ಉಪಯೋಗಿಸುತ್ತಿರುವ ಕಾರ್ಯವೂ ನಡೆದಿದದ್ದು ಒಟ್ಟಾರೆ ಶಾಸಕರ ವರ್ತನೆಗೆ ಕ್ಷೇತ್ರದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.