ಡೈಲಿ ವಾರ್ತೆ:15 ಫೆಬ್ರವರಿ 2023

ವಿಧಾನಸಭೆ ಚುನಾವಣೆ: 150 ಕ್ಷೇತ್ರಗಳಿಗೆ ಕಾಂಗ್ರೆಸ್‌ ಅಭ್ಯರ್ಥಿ ಹೆಸರು ಅಂತಿಮ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಸಂಬಂಧ ರಾಜ್ಯಕ್ಕೆ ಆಗಮಿಸಿದ್ದ ಸ್ಕ್ರೀನಿಂಗ್‌ ಕಮಿಟಿ ಸದಸ್ಯರು, ರಾಜ್ಯ ನಾಯಕರ ಜತೆ ಸಮಾಲೋಚನೆ ಪೂರ್ಣಗೊಳಿಸಿದ್ದು 150 ಕ್ಷೇತ್ರಗಳಿಗೆ ಒಂದೊಂದೇ ಹೆಸರಿನ ಪಟ್ಟಿ ಸಿದ್ಧಗೊಳಿಸಿದೆ.

224 ಕ್ಷೇತ್ರಗಳ ಪೈಕಿ ಒಂದೊಂದೇ ಹೆಸರು ಇರುವ 150 ಕ್ಷೇತ್ರಗಳ ಪಟ್ಟಿ ಮೊದಲ ಹಂತದಲ್ಲಿ ಬಿಡುಗಡೆಗೆ ಸಿದ್ಧತೆ ನಡೆದಿದ್ದು ಫೆಬ್ರವರಿ ಕೊನೆಯ ವಾರ ಕೇಂದ್ರ ಚುನಾವಣ ಸಮಿತಿ ಸಭೆ ಸೇರಿ ಅಂತಿಮಗೊಳಿಸಿ ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

40 ಕ್ಷೇತ್ರಗಳಿಗೆ ಎರಡೆರಡು ಹೆಸರು ಇದ್ದು, 34 ಕ್ಷೇತ್ರಗಳಿಗೆ ನಾಲ್ಕು ಆಕಾಂಕ್ಷಿಗಳಿದ್ದು ಅಂತಹ ಕ್ಷೇತ್ರಗಳಲ್ಲಿ ಒಮ್ಮತದ ಆಯ್ಕೆ ಕಗ್ಗಂಟಾಗುವ ಲಕ್ಷಣಗಳು ಕಂಡುಬರುತ್ತಿವೆ.

ಈ ಮಧ್ಯೆ ಹಾಲಿ ಶಾಸಕರು ಇರುವ ಪಾವಗಡ, ಶಿಡ್ಲಘಟ್ಟ, ಗುರುಮಿಟ್ಕಲ್‌, ಕುಂದಗೋಳ ಕ್ಷೇತ್ರಗಳಲ್ಲೂ ಅಭ್ಯರ್ಥಿ ಬದಲಾವಣೆಗೆ ಆಗ್ರಹ ಕೇಳಿ ಬಂದಿದ್ದು, ಹಲವು ಹೆಸರುಗಳು ಚರ್ಚೆಯಾಗಿವೆ. ಪಾವಗಡದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ಕಾಂಗ್ರೆಸ್‌, ಗೆಲುವಿನ ದೃಷ್ಟಿಯಿಂದ ದಲಿತ (ಎಡಗೈ) ಸಮುದಾಯಕ್ಕೆ ಟಿಕೆಟ್‌ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಈಶ್ವರ್‌ ಖಂಡ್ರೆ, ಸತೀಶ್‌ ಜಾರಕಿಹೊಳಿ, ಧ್ರುವನಾರಾಯಣ, ಕೇಂದ್ರದ ಮಾಜಿ ಸಚಿವರಾದ ಕೆ.ಎಚ್‌. ಮುನಿಯಪ್ಪ, ರೆಹಮಾನ್‌ ಖಾನ್‌, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಲಿ ಸೇರಿ ರಾಜ್ಯದ ಪ್ರಮುಖ ನಾಯಕರ ಜತೆ ಸಮಾಲೋಚನೆ ನಡೆಸಿದ ಸ್ಕ್ರೀನಿಂಗ್‌ ಕಮಿಟಿ ಅಧ್ಯಕ್ಷ ಮೋಹನ್‌ ಪ್ರಕಾಶ್‌ ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಮಂಗಳವಾರ ತಡರಾತ್ರಿ ಮತ್ತೊಮ್ಮೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಹರಿಪ್ರಸಾದ್‌, ಪರಮೇಶ್ವರ್‌, ಎಂ.ಬಿ. ಪಾಟೀಲ್‌ ಜತೆ ಪ್ರತ್ಯೇಕ ಮಾತುಕತೆ ಸಹ ನಡೆಸಿದರು. ರಾಜ್ಯ ನಾಯಕರ ಜತೆಗಿನ ಚರ್ಚೆ, ಸಲಹೆ-ಅಭಿಪ್ರಾಯಗಳ ಬಗ್ಗೆ ಸ್ಕ್ರೀನಿಂಗ್‌ ಕಮಿಟಿ ಎಐಸಿಸಿಗೆ ವರದಿ ನೀಡಲಿದ್ದು, ಈಗಾಗಲೇ ಕೆಪಿಸಿಸಿ ಸಲ್ಲಿಸಿರುವ ಶಿಫಾರಸು ಪಟ್ಟಿಯ ಬಗ್ಗೆಯೂ ಅಭಿಪ್ರಾಯ ಸಲ್ಲಿಸಲಿದೆ. ಅಂತಿಮವಾಗಿ ಎಐಸಿಸಿ ನಡೆಸಿರುವ ಸಮೀಕ್ಷೆ ಪ್ರಕಾರವೇ ಟಿಕೆಟ್‌ ಸಿಗಲಿದೆ ಎಂದು ಹೇಳಲಾಗಿದೆ.

25 ಟಿಕೆಟ್‌ಗೆ ಬೇಡಿಕೆ:
ಮುಸ್ಲಿಂ ಸಮುದಾಯ ಕೂಡ 25 ಟಿಕೆಟ್‌ಗೆ ಬೇಡಿಕೆ ಇಟ್ಟಿದೆ. ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇìವಾಲ ಅವರನ್ನು ಭೇಟಿ ಮಾಡಿದ್ದ ಜಮೀರ್‌ ಅಹಮದ್‌, ನಸೀರ್‌ ಅಹಮದ್‌, ಯು.ಟಿ. ಖಾದರ್‌, ಸಲೀಂ ಅಹಮದ್‌ ನೇತೃತ್ವದ ನಿಯೋಗ ಈ ಬಾರಿ 25 ಮಂದಿಗೆ ಅವಕಾಶ ಕೊಡುವಂತೆ ಕೋರಿದೆ. ಬೆಂಗಳೂರಿನಲ್ಲಿ ಐದು ಕಡೆ ಟಿಕೆಟ್‌ ನೀಡುವಂತೆಯೂ ಕೋರಿದೆ.