ಡೈಲಿ ವಾರ್ತೆ:18 ಫೆಬ್ರವರಿ 2023

ಕಲಬುರಗಿ: ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವ ಪೂಜೆಗೆ ಅವಕಾಶ: ಬಿಗಿ ಪೊಲೀಸ್ ಬಂದೋಬಸ್ತ್

ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯ ದೇವಸ್ಥಾನದ ಶಿವಲಿಂಗ ಪೂಜೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

ಶನಿವಾರ ಆಳಂದ ತಾಲೂಕಿನ ಚೆಕ್ ಪೋಸ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು, ಹೊರಗಡೆಯಿಂದ ಬರುವ ಎಲ್ಲಾ ವಾಹನಗಳ ತಪಾಸಣೆ ಕಡ್ಡಾಯವಾಗಿ ಮಾಡಬೇಕು. ಬೇರೆ ಕಡೆಗಳಿಂದ ಬರುವ ಎಲ್ಲ ಜನರ ಮೇಲೆ ತೀವ್ರ ನಿಗಾ ವಹಿಸಬೇಕು ಎಂದರು.

ಆಳಂದ ಪಟ್ಟಣದಾದ್ಯಂತ ಒಟ್ಟು ಸರಿ ಸುಮಾರು 1400 ಪೋಲಿಸರ ನಿಯೋಜನೆ, 11 ಕೆ.ಎಸ್.ಆರ್.ಪಿ ತುಕಡಿ, ಡಿಆರ್,ಕ್ಯೂ.ಎಂಡ್.ಟಿ ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದರು.
ಆಳಂದ ಪಟ್ಟಣದ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಹಾಗೂ ದರ್ಗಾದ ಊರುಸ್ ಗೆ ಇಲ್ಲಿಯ ವಕ್ಫ್ ಟ್ರಿಬೂನಲ್ ನ್ಯಾಯಾಲಯ ನೀಡಿದ ಆದೇಶದ ಪ್ರಕಾರವೇ ಎರಡು ಸಮುದಾಯಗಳಿಗೆ ಪೂಜೆಗೆ ಅವಕಾಶ ನೀಡಲಾಗುವುದು ಎಂದರು.

ಬೆಳಿಗ್ಗೆ 8 ಗಂಟೆಯಿಂದ 12 ಗಂಟೆವರೆಗೆ ಒಂದು ಸಮುದಾಯಕ್ಕೆ ಹಾಗೂ ಇನೊಂದು ಸಮುದಾಯಕ್ಕೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಪೂಜೆಗೆ ಅವಕಾಶ ಮಾಡಿ ಕೊಡಲಾಗುವುದು ಎಂದರು.