ಡೈಲಿ ವಾರ್ತೆ:18 ಫೆಬ್ರವರಿ 2023

ರಾಜ್ಯ ಸರಕಾರದಿಂದ ನಾರಾಯಣ ಗುರು ಅಭಿವೃದ್ಧಿ ನಿಗಮ ಎಂಬ ಸುಳ್ಳು ಭರವಸೆ ಶ್ರೀ ನಾರಾಯಣ ಗುರುಗಳಿಗೆ ಮಾಡಿದ ಅವಮಾನ

ಉಡುಪಿ: ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಜನರನ್ನು ಮೂರ್ಖ ಮಾಡುವಂತಹ ಪ್ರಣಾಳಿಕೆ, ಭರವಸೆ ನೀಡುವುದು ಸಾಮಾನ್ಯವಾದ ಈ ದಿನಗಳಲ್ಲಿ ಜನರು ಸರಕಾರಗಳ ಮೇಲೆ ಭರವಸೆಯನ್ನು ಇಟ್ಟುಕೊಳ್ಳುವುದು ಅಪರೂಪವಾಗಿ ಹೋಗಿದೆ.

ಆದರೆ ಒಂದು ಸರಕಾರ ಅಧಿಕಾರದಲ್ಲಿ ಇರುವಾಗ ಕೆಲವೇ ಕೆಲವು ದಿನಗಳ ಹಿಂದೆ ಘೋಷಿಸಿದ ಭರವಸೆಯಾದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಹಾಗೂ ಇದಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳ ಬಗ್ಗೆ ಮುಂದಿನ ಬಜೆಟ್ ನಲ್ಲಿ ಅನುದಾನ ನೀಡುವ ಬಗ್ಗೆ ಬಿಲ್ಲವ ಸಮಾಜದ ನಾಯಕರನ್ನು ಒಟ್ಟುಗೂಡಿಸಿ ಕರಾವಳಿಯ ಬಹುತೇಕ ಎಲ್ಲ ಶಾಸಕರ ಮತ್ತು ಸಚಿವರಾದ ಸುನಿಲ್ ಕುಮಾರ್ ರವರ ಸಮಕ್ಷಮದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ನೀಡುವ ಭರವಸೆಯ ವಿಚಾರ ಇಂದಿನ ಬಜೆಟ್ ನಲ್ಲಿ ಪ್ರಸ್ತಾಪ ಆಗದೆ ಯಾವುದೇ ಅನುದಾನ ನೀಡದೇ ಇರುವುದು ಸರಕಾರ ಶ್ರೀ ನಾರಾಯಣ ಗುರುಗಳ ಬಗ್ಗೆ ತನಗೆ ಇರುವ ಕಾಳಜಿ ಎಂತಹುದು ಎಂಬುದನ್ನು ಸಾಬೀತು ಪಡಿಸಿದೆ.

ಕಳೆದ ವರ್ಷದ ಗಣರಾಜ್ಯೋತ್ಸವ ದ ಪೇರೆಡ್ ನಲ್ಲಿ ನಾರಾಯಣ ಗುರುಗಳ ಸ್ತಬ್ದ ಚಿತ್ರಕ್ಕೆ ನಿರಾಕರಣೆ ನಂತರ ಶಾಲಾ ಪಠ್ಯ ಪುಸ್ತಕದಲ್ಲಿ ಶ್ರೀ ನಾರಾಯಣಗುರುಗಳ ವಿಚಾರಗಳಿಗೆ ಕತ್ತರಿ ಹಾಗೇನೇ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಭರವಸೆ ನೀಡಿ ಈಗ ಅದನ್ನು ನಿರ್ಲಕ್ಷಿಸುವ ಮೂಲಕ ಸರಕಾರ ಶ್ರೀ ನಾರಾಯಣ ಗುರುಗಳ ವಿರುದ್ಧ ಸೇಡು ತೀರಿಸುವ ತವಕದಲ್ಲಿದೆ ಎಂಬ ಅಭಿಪ್ರಾಯ ಸಾರ್ವಜನಿಕರು ಪಡುವಂತಾಗಿದೆ.

ರಾಜಕೀಯ ಪಕ್ಷದ ವಿಚಾರ ಪ್ರಸ್ತಾಪ ಮಾಡದೆ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಯಾವುದೇ ಸರಕಾರ ಶ್ರೀ ನಾರಾಯಣ ಗುರುಗಳ ಬಗ್ಗೆ ಇಷ್ಟು ಕಠಿಣವಾಗಿ ನಡೆದುಕೊಂಡ ಯಾವುದೇ ಉದಾಹರಣೆಗಳು ಇದರ ಮೊದಲು ಕಂಡುಬಂದಿಲ್ಲ. ಆದುದರಿಂದ ಮುಂಬರುವ ಸರಕಾರ ಯಾವುದೇ ಪಕ್ಷದ್ದಾಗಿರಲಿ ಶ್ರೀ ನಾರಾಯಣ ಗುರುಗಳ ಬಗ್ಗೆ ಗೌರವವನ್ನು ನೀಡಬೇಕು ಮತ್ತು ಗೌರವಯುತವಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಸ್ಥಾಪನೆ ಮಾಡಬೇಕು ಎಂಬ ದಿಟ್ಟ ನಿರ್ಧಾರಕ್ಕೆ ಕಟಿಬದ್ದರಾಗಿರಬೇಕು ಎಂಬ ಗಂಭೀರ ಸೂಚನೆಯನ್ನು ಸೂಕ್ಷ್ಮವಾಗಿ ನಾವು ನೀಡಲು ಇಚ್ಚಿಸುತ್ತೇವೆ ಎಂದು ಶ್ರೀನಾರಾಯಣ ಗುರು ಯುವ ವೇದಿಕೆ ಉಡುಪಿ ಇದರ ಗೌರವಾಧ್ಯಕ್ಷರಾದ ಸದಾಶಿವ ಅಮೀನ್ ಕಟ್ಟೆಗುಡ್ಡೆ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.