ಡೈಲಿ ವಾರ್ತೆ:22 ಫೆಬ್ರವರಿ 2023
ಭಟ್ಕಳ: ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿದ್ರಾ ಸಿ.ಟಿ.ರವಿ?
ಉತ್ತರಕನ್ನಡ: ಈ ಹಿಂದೆ ಮಾಂಸಾಹಾರ ಸೇವಿಸಿ ಧರ್ಮಸ್ಥಳಕ್ಕೆ ತೆರಳಿದ್ದ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸ್ವತಃ ಇತ್ತೀಚೆಗೆ ಭಟ್ಕಳಕ್ಕೆ ಭೇಟಿ ನೀಡಿದ್ದ ವೇಳೆ ಭರ್ಜರಿ ಮೀನೂಟ ಸೇವಿಸಿ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋ ಇದೀಗ ಟ್ರೋಲಾಗಿದೆ.
ಛತ್ರಪತಿ ಶಿವಾಜಿ ಜಯಂತಿ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರವಾರಕ್ಕೆ ಫೆ.19ರಂದು ಭೇಟಿ ನೀಡಿದ್ದ ಸಿ.ಟಿ.ರವಿ, ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮ ಮುಗಿಸಿ ಭಟ್ಕಳಕ್ಕೆ ತೆರಳಿದ್ದರು. ಈ ವೇಳೆ ಶಾಸಕ ಸುನಿಲ್ ನಾಯ್ಕ ಅವರ ಶಿರಾಲಿಯ ಮನೆಯಲ್ಲಿ ಬಿಜೆಪಿಯ ಸ್ಥಳೀಯ ಮುಖಂಡರ ಜೊತೆ ಸಿ.ಟಿ.ರವಿ ಮೀನೂಟ ಸೇವಿಸಿರುವ ಫೋಟೋ ವೈರಲ್ ಆಗಿದೆ.
ಫೋಟೋದಲ್ಲಿ ವಕೀಲ ಹಾಗೂ ಬಿಜೆಪಿಯ ಮಾಜಿ ತಾಲೂಕು ಮಂಡಳಾಧ್ಯಕ್ಷ ರಾಜೇಶ್ ನಾಯ್ಕ, ಶಾಸಕ ಸುನೀಲ್ ನಾಯ್ಕ ಅವರೊಂದಿಗೆ ಸಿ.ಟಿ.ರವಿ ಊಟ ಸೇವಿಸಿದ್ದು, ಊಟದ ಪ್ಲೇಟಿನಲ್ಲಿ ಮೀನು ಪ್ರೈ, ಚಪಾತಿ, ಚಿಪ್ಪೆಕಲ್ಲಿನ ಸುಕ್ಕಾ ಇರುವುದು ಕಾಣಿಸುತ್ತಿದೆ. ಆದರೆ ಈ ವೇಳೆ ಶಾಸಕ ಸುನೀಲ್ ನಾಯ್ಕ ಊಟ ಸೇವಿಸದಿರುವುದು ಫೋಟೋದಲ್ಲಿ ಕಂಡುಬಂದಿದೆ.
ಶಿರಾಲಿಯಲ್ಲಿ ಊಟ ಸೇವಿಸಿದ ಬಳಿಕ ಸಿ.ಟಿ.ರವಿ ಭಟ್ಕಳದ ನಗರದಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದು, ಅಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಕಾರ್ಯಕರ್ತರ ಸಭೆಯ ಬಳಿಕ ನಗರ ಭಾಗದಲ್ಲಿರುವ, ಇತ್ತೀಚಿಗೆ ಅಭಿವೃದ್ಧಿಪಡಿಸಲಾಗಿರುವ ರಾಜಾಂಗಣ ನಾಗಬನಕ್ಕೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವಸ್ಥಾನದ ಬಾಗಿಲಿನಲ್ಲೇ ಸಿ.ಟಿ.ರವಿಗೆ ದೇವಸ್ಥಾನದ ಕಮಿಟಿ ಹಾಗೂ ಶಾಸಕ ಸುನೀಲ್ ನಾಯ್ಕ ಶಾಲು ಹೊದಿಸಿ ಸನ್ಮಾನಿಸಿದ್ದಾರೆ. ತದನಂತರ ಸಮೀಪದ ಕರಿಬಂಟ ದೇವಸ್ಥಾನಕ್ಕೂ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.