ಡೈಲಿ ವಾರ್ತೆ:26 ಫೆಬ್ರವರಿ 2023
ಕಾರ್ಕಳ: ಮೃತ ವ್ಯಕ್ತಿಯ ಕೋಟ್ಯಂತರ ಬೆಲೆ ಬಾಳುವ ಆಸ್ತಿ ,ನಗದು ಲಪಟಾಯಿಸಿ ವಂಚನೆ
ಕಾರ್ಕಳ: ಮರಣಾನಂತರ ತಂದೆಯ ಹೆಸರಲ್ಲಿದ್ದ ಕೋಟ್ಯಂತರ ರೂ. ಮೌಲ್ಯದ ಸ್ಥಿರಾಸ್ತಿ ,ಶೇರುಗಳು ಮತ್ತು ಕೋಟ್ಯಂತರ ರೂ ನಗದನ್ನು ಆರೋಪಿಗಳು ತಮ್ಮ ಹೆಸರಿಗೆ ಮೋಸದಿಂದ ವರ್ಗಾಯಿಸಿಕೊಂಡಿದ್ದಾಗಿ ಕಾರ್ಕಳದ ದಿ. ಅಶೋಕ್ ರಾವ್ ಎಂಬವರ ಪುತ್ರ ಪುನೀತ್ ರಾವ್( 38 ) ಎಂಬವರು ದೂರು ನೀಡಿದ್ದಾರೆ.
ದಿನೇಶ್ ಕೆ (51) ಮತ್ತು ಪ್ರಸಾದ್ ಕೆ. (27) ಆರೋಪಿಗಳಾಗಿದ್ದಾರೆ.
ಪುನೀತ್ ರಾವ್ ರ ತಂದೆ ದಿ. ಕಾರ್ಕಳ ಅಶೋಕ್ ರಾವ್ ರ ಹೆಸರಿನಲ್ಲಿ ಕಾರ್ಕಳ ಕಸಬಾದಲ್ಲಿ ಎಕರೆಗಟ್ಟಲೆ ಸ್ಥಿರಾಸ್ತಿ, ಬ್ಯಾಂಕ್ ಖಾತೆ ಹಾಗೂ ವಿವಿಧ ಶೇರುಗಳನ್ನು ಹೊಂದಿದ್ದರು. ಅವರು ಕಾರ್ಕಳದಲ್ಲಿರುವ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು ದಿನಾಂಕ 13-07-2020 ರಂದು ಮನೆಯಲ್ಲಿ ಮೃತ್ಯುಪತ್ರವನ್ನು ಬರೆಯದೇ ಮೃತಪಟ್ಟಿದ್ದರು. ಅವರು ಮೃತಪಟ್ಟ ಮಾಹಿತಿಯನ್ನು ಆರೋಪಿ ದಿನೇಶ್ ಕೆ ಮತ್ತು ಅವರ ಪತ್ನಿ ಮಂಜುಳಾ ಎಂಬವರು ಪುನೀತ್ ರಾವ್ ಸಂಬಂಧಿಕರಾದ ಕೃಷ್ಣ ರಾವ್ ಎಂಬವರಿಗೆ ಮಾಹಿತಿ ನೀಡಿರುತ್ತಾರೆ. ಕೂಡಲೇ ಕೃಷ್ಣ ರಾವ್ ಮತ್ತು ಅವರ ಮಗ ಬಂದಾಗ ಮೃತದೇಹದ ಬಳಿ ಅಪಾದಿತರು ಇದ್ದು ದೂರುದಾರರ ಸಂಬಂಧಿಕರಾದ ಶೈಲೇಂದ್ರ ರಾವ್ ಎಂಬವರು ಮರಣದ ಬಗ್ಗೆ ಮಾಹಿತಿ ನೀಡಿರುತ್ತಾರೆ. ವಿದೇಶದಲ್ಲಿದ್ದ ಕಾರಣ ಪುನೀತ್ ರಾವ್ ತಾಯಿ ಮತ್ತು ಸಹೋದರಿಗೆ ಕೋವಿಡ್ ಲಾಕ್ ಡೌನ್ ಕಾರಣದಿಂದ ಊರಿಗೆ ಬಂದಿರುವುದಿಲ್ಲ. ಮೃತಪಟ್ಟ ಮರುದಿನ ಪುನೀತ್ ರಾವ್ ತಂದೆಯ ಹೆಸರಿನಲ್ಲಿರುವ ರೂ 4,24,90,548.90/- ಶೇರುಗಳನ್ನು ಮತ್ತು ಅವರ ಹೆಸರಿನಲ್ಲಿದ್ದ ಸ್ಥಿರಾಸ್ತಿಗಳನ್ನು, ರೂ. 2,20,76,238.81 ಬ್ಯಾಂಕ್ ಡೆಪೋಸಿಟ್‌ಗಳನ್ನು ಮೋಸದಿಂದ ಆರೋಪಿಗಳು ತಮ್ಮ ಹೆಸರಿಗೆ ವರ್ಗಾವಣೆ ಮಾಡಿ ನಿಜವಾದ ವಾರೀಸುದಾರರಾದ ಪುನೀತ್ ರಾವ್ ಅವರ ತಾಯಿ ಮತ್ತು ಸಹೋದರಿಗೆ ಮೋಸ ವಂಚನೆ ಮಾಡಿರುವುದಾಗಿ
ದೂರು ದಾಖಲಾಗಿದ್ದು ,ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.