ಡೈಲಿ ವಾರ್ತೆ:01 ಮಾರ್ಚ್ 2023

ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳಕ್ಕೆ ಆದೇಶ

ಬೆಂಗಳೂರು: 7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸುತ್ತಿದ್ದ ಸಭೆ ಅಂತ್ಯಗೊಂಡಿದ್ದು, ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ ಮಾಡಲು ಆದೇಶ ಹೊರಡಿಸಿದ್ದಾರೆ.

ರೇಸ್ ಕೋರ್ಸ್ ಬಳಿಯ ಸರ್ಕಾರಿ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಮಿಯವರು ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದ್ದು, ಈ ಕುರಿತು ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.

ಮಂಗಳವಾರ ನೌಕರರ ಜೊತೆ ಚರ್ಚೆ ಆದ ಬಳಿಕ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದೆ. ಈ ವೇಳೆ ಒಂದು ಒಪ್ಪಂದಕ್ಕೆ ಬಂದಿದ್ದೇವೆ. ಶೇ.17 ಹೆಚ್ಚಳಕ್ಕೆ ಒಪ್ಪಿಗೆ ನೀಡಲಾಗಿದೆ. ಸರ್ಕಾರಿ ನೌಕಕರು ಮುಷ್ಕರ ಕೈಬಿಡ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

ಎನ್ಸಿಎಸ್ ರದ್ದು ಬಗ್ಗೆ ಸಮಿತಿ ರಚನೆ ಬಳಿಕ ಸರ್ಕಾರದಿಂದ ಮಹತ್ವದ ನಿರ್ಣಯ ಕೈಗೊಳ್ಳಲಾಗುವುದು. ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದು ಮಾಡುವ ಬೇಡಿಕೆ ಪರಾಮರ್ಶೆ ಮಾಡುತ್ತೇವೆ. ಎಸಿಎಸ್ ನೇತೃತ್ವದಲ್ಲಿ ಸಮಿತಿ ರಚಿಸುತ್ತೇವೆ. ಬೇರೆ ರಾಜ್ಯಗಳಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಎಂದು ಅಧ್ಯಯನ ನಡೆಸಿ ವರದಿ ಕೊಡಲು ಸೂಚಿಸುತ್ತೇನೆಂದರು.

ಚುನಾವಣೆಯ ಹೊತ್ತಲ್ಲೇ ಸರ್ಕಾರದ ವಿರುದ್ಧ ಸರ್ಕಾರಿ ನೌಕರರು ಸಮರ ಸಾರಿದ್ದಾರೆ. 7ನೇ ವೇತನ ಆಯೋಗ ಜಾರಿ, ಹೊಸ ಪಿಂಚಣಿ ನೀತಿ ವಿರೋಧಿಸಿ ಹಳೇ ಪಿಂಚಣಿ ನೀತಿಗೆ ಆಗ್ರಹಿಸಿ ಸರ್ಕಾರಿ ನೌಕರರು ಮುಷ್ಕರ ನಡೆಸುತ್ತಿದ್ದಾರೆ.