ಡೈಲಿ ವಾರ್ತೆ:04 ಮಾರ್ಚ್ 2023
KSDL ಟೆಂಡರ್ ಲಂಚ ಪ್ರಕರಣ: ಕಾಂಗ್ರೆಸ್ ಕಾರ್ಯಕರ್ತರಿಂದ ಬೊಮ್ಮಾಯಿ ರಾಜೀನಾಮೆಗೆ ಒತ್ತಾಯಿಸಿ ಸಿಎಂ ಕಚೇರಿಗೆ ಮುತ್ತಿಗೆ
ಬೆಂಗಳೂರು: ಕೆಎಸ್’ಡಿಎಲ್ ಟೆಂಡರ್ ಲಂಚ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಬೇಕು, ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಶನಿವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿ‘ಟನೆ ನಡೆಸಿ, ಮುಖ್ಯಮಂತ್ರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದೆ.
ರೇಸ್’ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪ್ರತಿಟನೆಯ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸೂಟ್’ಕೇಸ್ ಹಿಡಿದುಕೊಂಡು ಮುಖ್ಯಮಂತ್ರಿ ಮನೆಯತ್ತ ಮೆರವಣಿಗೆ ನಡೆಸಿದರು. ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ ಸಿಕ್ಕ ಕಂತೆ ಕಂತೆ ಹಣವನ್ನು ತುಂಬಿದ್ದ ಬ್ಯಾಗ್’ಗಳ ಹಾಗೂ ನೋಟುಗಳ ಅಣುಕು ಪ್ರದರ್ಶನ ನಡೆಸಲಾಯಿತು.
ಬಿಜೆಪಿಯದು ರೋಲ್’ಕಾಲ್ ಮಾಡೇಲ್, ಜನ ವಿರೋಧಿ ಬಿಜೆಪಿ, ಶೇ.40ರಷ್ಟು ಕಮಿಷನ್ ಸರ್ಕಾರ ಮುಂತಾದ ಬರಹಗಳಿದ್ದ ಸೂಟ್’ಕೇಸ್ ಮಾದರಿಯ ಪೋಸ್ಟರ್’ಗಳನ್ನು ಕಾರ್ಯಕರ್ತರು ಪ್ರದರ್ಶಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೇವಲ ಪ್ರಶಾಂತ್ ಮಾಡಾಳ್ ಅವರನ್ನು ಬಂಧಿಸುವುದಲ್ಲ, ಅವರ ತಂದೆ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ತಕ್ಷಣ ಬಂಧಿಸಬೇಕು ಮತ್ತು ಬೊಮ್ಮಾಯಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ವಿರುದ್ಧದ ಎಲ್ಲಾ ಭ್ರಷ್ಟಾಚಾರದ ಆರೋಪಗಳಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ದಾಖಲೆ ಕೇಳುತ್ತಾರೆ, ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ಡಿವೈಎಸ್’ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಜಾರ್ಜ್ ಅವರು ತಪ್ಪು ಮಾಡದಿದ್ದರೂ ರಾಜೀನಾಮೆ ನೀಡಿದ್ದರು, ನಾನು ಜಾರ್ಜ್ ಅವರಿಗೆ ನೀವು ರಾಜೀನಾಮೆ ಕೊಡುವುದು ಬೇಡ ಎಂದು ಹೇಳಿದ್ದೆ, ಆದರೂ ಅವರು ನೈತಿಕತೆ ಆಧಾರದಲ್ಲಿ ರಾಜೀನಾಮೆ ನೀಡಿದ್ದರು. ದೇವೇಗೌಡರು ನಮ್ಮ ವಿರುದ್ಧ ಒಂದಂಕಿ ಲಾಟರಿ ಆರೋಪ ಮಾಡಿದಾಗ ಕೂಡಲೇ ಪತ್ರಿಕಾಗೋಷ್ಠಿ ಕರೆದು ಅದನ್ನು ಸಿಬಿಐಗೆ ವಹಿಸಿದ್ದೆ, ಪರೇಶ್ ಮೇಸ್ತಾ ಎಂಬ ಯುವಕ ಕಾಲುಜಾರಿ ಬಿದ್ದು ಸತ್ತಾಗ ಅದನ್ನು ಕೊಲೆ ಎಂದು ದೊಂಬಿ, ಗಲಾಟೆ ಎಬ್ಬಿಸಿದರು, ಅದನ್ನು ಕೂಡ ಸಿಬಿಐ ತನಿಖೆಗೆ ವಹಿಸಿದ್ದೆ, ಈ ಯಾವುದೇ ಪ್ರಕರಣದಲ್ಲಿ ನಾವು ಬಿಜೆಪಿಯವರಿಂದ ದಾಖಲೆ ಕೇಳಿಲ್ಲ, ನಮ್ಮ ಸರ್ಕಾರದ ಅವಧಿಯಲ್ಲಿ ಒಟ್ಟು 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದ್ದೆ, ಇಂದು ಆ ಎಲ್ಲಾ ಪ್ರಕರಣಗಳಲ್ಲಿ ಸಿಬಿಐ ಬಿ ರಿಪೋರ್ಟ್ ನೀಡಿದೆ. ನಮ್ಮ ಮೇಲಿನ ಎಲ್ಲಾ ಆರೋಪಗಳು ಸುಳ್ಳು ಎಂದು ಸಾಬೀತಾಗಿದೆ. ಈ ಬಸವರಾಜ ಬೊಮ್ಮಾಯಿಗೆ ಮಾನ ಮರ್ಯಾದಿ ಇದೆಯಾ? ಅಧಿಕಾರಕ್ಕೆ ಅಂಟಿಕೊಂಡು ಕೂತಿದ್ದಾರೆ. ಒಂದನ್ನಾದರೂ ತನಿಖೆ ಮಾಡಿಸಿದ್ರಾ? ಎಂದು ವಾಗ್ದಾಳಿ ನಡೆಸಿದರು.
8 ಕೋಟಿಗೂ ಅಧಿಕ ಮೊತ್ತದ ಹಣ, ಆಭರಣಗಳನ್ನು ಲೋಕಾಯುಕ್ತದವರು ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಿಂದ ಸೀಜ್ ಮಾಡಿದ್ದಾರೆ. ನನ್ನ ಪ್ರಕಾರ ಬೊಮ್ಮಾಯಿ ಈಗಾಗಲೇ ರಾಜೀನಾಮೆ ಕೊಟ್ಟುಬಿಡಬೇಕಿತ್ತು. ಸಿದ್ದರಾಮಯ್ಯ ಅವರ ಸರ್ಕಾರ ಎಐಸಿಸಿಗೆ ಎಟಿಎಂ ಆಗಿತ್ತು ಎಂದು ಅಮಿತ್ ಶಾ ಅವರು ನಿನ್ನೆ ಆರೋಪ ಮಾಡಿದ್ದಾರೆ, ಇದಕ್ಕೇನು ಹೇಳ್ತೀರಿ ಶಾ? ಗಡಿಪಾರಾಗಿದ್ದ, ಜೈಲಿಗೆ ಹೋಗಿದ್ದ ಶಾ ಅವರಿಂದ ಪಾಠ ಕಲಿಯಬೇಕ ನಾವು? ದೇಶದ ದುರಂತ ನೋಡ್ರೀ ಎಂದು ಹೇಳಿದರು.
ಮರ್ ಜಾ ಮೋದಿ ಎಂದು ಕಾಂಗ್ರೆಸ್ ನವರು ಹೇಳುತ್ತಾರೆ ಎಂದು ಮೋದಿ ಅವರು ಜನರ ಸಿಂಪತಿ ಗಳಿಸಲು ನಾಟಕ ಮಾಡುತ್ತಿದ್ದಾರೆ. ನಿಮ್ಮ ಬಳಿ ಇಂಟಲಿಜೆನ್ಸ್ ಇದೆ, ರಾ ಇದೆ, ಹೀಗೆ ಕೂಗಿದವರನ್ನು ಜೈಲಿಗೆ ಹಾಕೋದಲ್ವಾ ಮೋದಿಜಿ? ಇನ್ನು ಯಾಕೆ ಸುಮ್ಮನಿದ್ದೀರಿ? ಮೋದಿ ಅವರಿಗೆ ಯಡಿಯೂರಪ್ಪ ಅವರ ಮೇಲೆ ನಿಜವಾಗಿ ಕಾಳಜಿ ಇಲ್ಲ. ಅವರ ಮೇಲೆ ಇದ್ದಕ್ಕಿದ್ದಂತೆ ಸಿಂಪತಿ ಬಂದಂತೆ ನಾಟಕ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಕೇಂದ್ರ ನಾಯಕರು ಕೇಳಿದಷ್ಟು ದುಡ್ಡು ಕಳಿಸುತ್ತಿರಲಿಲ್ಲ ಎಂದು ಕಾಣುತ್ತೆ ಅದಕ್ಕೆ ಅವರನ್ನು ಅಧಿಕಾರದಿಂದ ಇಳಿಸಿ, ಆರ್,ಎಸ್,ಎಸ್ ನ ಕೈಗೊಂಬೆಯಂತೆ ಕೆಲಸ ಮಾಡುವ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಪಾಪ ಯಡಿಯೂರಪ್ಪ ಅವರು ಕಣ್ಣೀರು ಹಾಕುತ್ತಾ ಅಧಿಕಾರದಿಂದ ಇಳಿಯುವ ಹಾಗೆ ಮಾಡಿದ್ರಲ್ಲ ಮೋದಿಜಿ, ಈಗ ಓಟಿಗಾಗಿ ಅವರ ಕೈ ಹಿಡಿದುಕೊಂಡು ಹೊಗಳುತ್ತೀರ? ಎಂದು ಪ್ರಶ್ನಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ಸಿಂಗ್ ಸುರ್ಜೇವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲಿಂ ಅಹ್ಮದ್, ಮಾಜಿ ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕ ನಾಯಕರು ಭಾಗವಹಿಸಿದ್ದರು.