ಡೈಲಿ ವಾರ್ತೆ:04 ಮಾರ್ಚ್ 2023
ಕಸದ ರಾಶಿಗೆ ಎಸೆದ 4-5 ತಿಂಗಳ ಮಗುವಿನ ಮೇಲೆ ವಾಹನ ಹರಿದು ಸಾವು!
ಬೆಂಗಳೂರು: ಉತ್ತರ ಬೆಂಗಳೂರಿನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಸದ ರಾಶಿಯಲ್ಲಿ ಬಿಸಾಡಲಾಗಿದ್ದ ನಾಲ್ಕೈದು ತಿಂಗಳ ಮಗುವೊಂದರ ಮೇಲೆ ವೇಗವಾಗಿ ಬಂದ ವಾಹನಗಳು ಹರಿದ ಪರಿಣಾಮವಾಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಲಾರಿಗೆ ಕಸ ತುಂಬುತ್ತಿದ್ದಾಗ ಮಗುವನ್ನು ತುಂಬಿದ್ದ ಕವರ್ ರಸ್ತೆಗೆ ಬಿದ್ದಿದೆ. ಈ ವೇಳೆ ವೇಗವಾಗಿ ಬಂದ ವಾಹನಗಳು ಆ ಕವರ್ ಮೇಲೆ ಹರಿದ ಪರಿಣಾಮ ನಜ್ಜು ಗುಜ್ಜಾಗಿ ಸಾವನ್ನಪ್ಪಿದೆ.
ಅಮೃತಹಳ್ಳಿ ಬಳಿಯ ಪಂಪಾ ಲೇಔಟ್‌ನಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು ದಾರಿಹೋಕರು ಪೊಲೀಸರಿಗೆ ವಿಷಯ ತಿಳಿಸಿದ ಬಳಿಕ ವಿಚಾರ ಬೆಳಕಿಗೆ ಬಂದಿದೆ. ಮಗುವನ್ನು ಅಲ್ಲಿಯೇ ಬಿಟ್ಟು ಹೋಗಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆಗೆ ಬೆಂಗಳೂರು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಫೆಬ್ರವರಿ 28 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶಿಶುವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ಲಾರಿಗೆ ಕಸ ತುಂಬುತ್ತಿದ್ದಾಗ ಒಳಗಿದ್ದ ಶಿಶುವಿನ ಕವರ್ ರಸ್ತೆಗೆ ಬಿದ್ದಿದೆ. ಪ್ಲಾಸ್ಟಿಕ್‌ನೊಳಗೆ ಮಗು ಸುತ್ತಿರುವುದನ್ನು ಗಮನಿಸಲು ಸಾಧ್ಯವಾಗದೆ, ಹಲವಾರು ವಾಹನಗಳು ಅದರ ಮೇಲೆ ಹರಿದು ಅದರ ಸಾವಿಗೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ರಾಶಿಯಲ್ಲಿ ಎಸೆದಿದ್ದಾರೆ. ಮಧ್ಯಾಹ್ನ 1.30ರ ಸುಮಾರಿಗೆ ಬಿಬಿಎಂಪಿ ಟ್ರಕ್‌ಗೆ ತ್ಯಾಜ್ಯ ತುಂಬಲಾಗಿತ್ತು. ಲಾರಿ ಚಲಿಸುತ್ತಿದ್ದಂತೆ ಒಳಗಿದ್ದ ಶಿಶುವಿನ ಕವರ್ ರಸ್ತೆಯ ಮೇಲೆ ಬಿದ್ದಿದೆ. ಕವರ್ ಸುತ್ತಲೂ ಚೆಲ್ಲಿದ ಕಸ ಇದನ್ನು ಸಾಬೀತುಪಡಿಸಿತು. ಮಗುವನ್ನು ಗಮನಿಸದೆ ಹಲವು ವಾಹನಗಳು ಕವರ್ ಮೇಲೆ ಹರಿದು ಶಿಶು ಪ್ರಾಣಬಿಟ್ಟಿದೆ. ದೇಹ ನಜ್ಜು ಗುಜ್ಜಾಗಿರುವುದರಿಂದ ಲಿಂಗವನ್ನು ತಿಳಿಯುವುದು ಕಷ್ಟವಾಗಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ.