ಡೈಲಿ ವಾರ್ತೆ:05 ಮಾರ್ಚ್ 2023

ಡಿಎಂಕೆ ಪಕ್ಷದ ವಿರುದ್ಧ ಪ್ರಚೋಧನಕಾರಿ ಹೇಳಿಕೆ:
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲು!

ಚೆನ್ನೈ: ಸಾಮಾಜಿಕ ಜಾಲತಾಣದಲ್ಲಿ ಡಿಎಂಕೆ ಪಕ್ಷದ ವಿರುದ್ಧ ಪ್ರಚೋಧನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ರಾಜ್ಯದಲ್ಲಿ ವಲಸೆ ಕಾರ್ಮಿಕರ ಮೇಲೆ ನಡೆಯುತ್ತಿರುವ ಹಲ್ಲೆಗೆ ಆಡಳಿತಾರೂಢ ಡಿಎಂಕೆ ಪಕ್ಷವೇ ಕಾರಣ ಮೂಲ ಕಾರಣವೆಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಣ್ಣಾಮಲೈ ಪೋಸ್ಟ್ ವಿರುದ್ಧ ಕಿಡಿಕಾರಿದ ಡಿಎಂಕೆ ನಾಯಕರು ನಮ್ಮ ಪಕ್ಷದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ, ಅಲ್ಲದೆ ರಾಜ್ಯದಲ್ಲಿ ಒಳ್ಳೆಯ ಕೆಲಸಗಳು ಆಗಿವೆ ಇದರ ಬಗ್ಗೆ ಯಾವುದೇ ಹೇಳಿಕೆ ನೀಡದೆ ನಮ್ಮ ಪಕ್ಷದ ವಿರುದ್ಧ ಜನರಲ್ಲಿ ದ್ವೇಷದ ಭಾವನೆ ಬಿತ್ತುವ ಕೆಲಸ ಅಣ್ಣಾಮಲೈ ಮಾಡುತ್ತಿದ್ದಾರೆ ಹಾಗಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಡಿಎಂಕೆ ನಾಯಕರು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.ಡಿಎಂಕೆ ಹೇಳಿಕೆಗೆ ಅಣ್ಣಾಮಲೈ ತಿರುಗೇಟು ಕೂಡ ನೀಡಿದ್ದು ಪಕ್ಷ ಅಧಿಕಾರಕ್ಕೆ ಬಂದಾಗಿನಿಂದ ಒಂದು ನಿರ್ದಿಷ್ಟ ಸಮುದಾಯದ ಜನರ ವಿರುದ್ಧ ದ್ವೇಷವನ್ನು ಸಾಧಿಸುತ್ತಿದೆ. ಪಕ್ಷದ ಸಚಿವರು ಮತ್ತು ಸಂಸದರು ತಮ್ಮ ಭಾಷಣಗಳಲ್ಲಿ ಉತ್ತರ ಭಾರತೀಯರನ್ನು ಹಲವು ಬಾರಿ ಅಪಹಾಸ್ಯ ಮಾಡಿದ್ದಾರೆ” ಎಂದು ಹೇಳಿದ್ದಾರೆ.