ಡೈಲಿ ವಾರ್ತೆ:08 ಮಾರ್ಚ್ 2023

ಉಡುಪಿ ಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜ: ಮಿಥುನ್ ರೈ ವಿವಾದ ಹೇಳಿಕೆ!

ಮಂಗಳೂರು : ಕಾಂಗ್ರೆಸ್ ಯುವ ಮುಖಂಡ, ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಮಿಥುನ್ ರೈ ಅವರು ”ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಮುಸ್ಲಿಂ ರಾಜ ಜಾಗ ನೀಡಿದ್ದು” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದು ಈ ಕುರಿತು ಹಿಂದೂ ಪರ ಸಂಘಟನೆಗಳು ಸೇರಿ ಬಿಜೆಪಿ ನಾಯಕರು ವ್ಯಾಪಕ ಆಕ್ರೋಶ ಹೊರ ಹಾಕಿ ತಿರುಗೇಟು ನೀಡಿದ್ದಾರೆ.
ಮೂಡಬಿದಿರೆಯ ಪುತ್ತಿಗೆಯಲ್ಲಿ ನಡೆದ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಥುನ್ ರೈ ಅವರು, ಈ ಹೇಳಿಕೆ ನೀಡಿದ್ದು, ಹಿಂದೂ ಪರ ಸಂಘಟನೆಗಳು ವ್ಯಾಪಕ ಆಕ್ರೋಶ ಹೊರ ಹಾಕಿ ಸ್ಪಷ್ಟನೆ ನೀಡಲು ಕೇಳಿಕೊಂಡ ಬಳಿಕ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಸೌಹಾರ್ದತೆಯ ಕುರಿತು ನಾನು ಹೇಳಿಕೆ ನೀಡಿದ್ದೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಶಾಸಕ ರಘುಪತಿ ಭಟ್ ಆಕ್ರೋಶ:
ಮಿಥುನ್ ರೈ ಹೇಳಿಕೆ ಕುರಿತು ಉಡುಪಿ ಶಾಸಕ ರಘುಪತಿ ಭಟ್ ಅವರು ಆಕ್ರೋಶ ಹೊರ ಹಾಕಿದ್ದು, ಮುಸ್ಲಿಂ ರಾಜ ಮಠಕ್ಕೆ ಜಾಗ ಕೊಟ್ಟಿಲ್ಲ. ಅನಂತೇಶ್ವರ ದೇಗುಲಕ್ಕೆ ರಾಮಭೋಜ ಭೂಮಿ ಕೊಟ್ಟ ಉಲ್ಲೇಖವಿದ್ದು, ಅಲ್ಲಿಯ ಭೂಮಿಯೇ ಕೃಷ್ಣ ಮಠಕ್ಕೆ ಬಳಕೆಯಾಗಿದೆ. 850 ವರ್ಷಗಳ ಹಿಂದೆ ಮಧ್ವಾಚಾರ್ಯರು ಮಠ ನಿರ್ಮಾಣ ಮಾಡಿದ್ದರು ಎಂದಿದ್ದಾರೆ.

ಉಡುಪಿಯಲ್ಲಿರುವ ಜಾಮಿಯಾ ಮಸೀದಿ ಕೂಡ ಹಿಂದೆ ಜಂಗಮರ ಮಠದ ಜಾಗದಲಿತ್ತು ಎಂದು ಹೇಳಲಾಗಿತ್ತು. ಶೋಕಮಾತಾ ಚರ್ಚ್ ಗೆ ಕೂಡ ಭೂಮಿಯನ್ನು ಕೃಷ್ಣಾಪುರ ಮಠದವರು ನೀಡಿರುವ ಬಗ್ಗೆ ಮಾಹಿತಿಗಳಿವೆ. ಉಡುಪಿ ಸೌಹಾರ್ದತೆಗೆ ಹೆಸರುವಾಸಿಯಾದ ಪ್ರದೇಶ. ಹಾಜಿ ಅಬ್ದುಲ್ಲಾ ಸಾಹೇಬರು ಭಕ್ತರಾಗಿ ಕೃಷ್ಣ ಮಠಕ್ಕೆ ಸಹಾಯ ಮಾಡಿದ್ದಾರೆ. ಆದರೆ ಮಿಥುನ್ ರೈ ಹೇಳಿರುವ ರಾಜ ಯಾರು ಎಂದು ಪ್ರಶ್ನಿಸಿದ್ದಾರೆ.
ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಸೇರಿ ಹಿಂದೂ ಪರ ಸಂಘಟನೆಗಳು ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ.