ಡೈಲಿ ವಾರ್ತೆ:13 ಮಾರ್ಚ್ 2023
ಸಚಿವ ಕೋಟಾ ಮನೆ ಮುಂದೆ ಎಸ್.ಸಿ. ಎಸ್.ಟಿ. ಸಂಘಟನೆಯಿಂದ ಧರಣಿ: ದೌರ್ಜನ್ಯ ನಿಷೇಧ ಕಾಯ್ದೆಯನ್ನು ಸಮಗ್ರವಾಗಿ ಜಾರಿಗೆ ತನ್ನಿ. ಇಲ್ಲದೇ ಇದ್ದರೆ ಕುರ್ಚಿ ಖಾಲಿ ಮಾಡಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಟಿ.ಡಿ.ರಾಜಗಿರಿ
ಕೋಟ: ರಾಜ್ಯದಲ್ಲಿ ದಲಿತರನ್ನು ತುಚ್ಛವಾಗಿ ನೋಡಲಾಗುತ್ತಿದೆ. ಸಾಮಾಜಿಕ ಅಸಮತೋಲನ ತೊಡೆದು ಹಾಕುವಲ್ಲಿ ಸರ್ಕಾರ ವಿಫಲವಾಗಿದೆ. ದೌರ್ಜನ್ಯ ನಿಷೇಧ ಕಾಯ್ದೆಯನ್ನು ಸಮಗ್ರವಾಗಿ ಜಾರಿಗೆ ತನ್ನಿ. ಇಲ್ಲದೇ ಇದ್ದರೆ ಕುರ್ಚಿ ಖಾಲಿ ಮಾಡಿ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ರಾಜಗಿರಿ ದೂರಿದರು.
ಕೋಟದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮನೆಯ ಮುಂದೆ ಚಿತ್ರದುರ್ಗದ ಹಿರಿಯೂರು ಚಳ್ಳೆಕೆರೆ ವ್ಯಾಪ್ತಿಯ ದಲಿತ ಸಂಘರ್ಷ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ 1989ರಲ್ಲಿ ದಲಿತರಿಗಾಗಿ ತಂದ ಕಾಯಿದೆಯನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇಂದಿಗೂ ರಾಜ್ಯದ ಹೆಚ್ಚಿನ ಭಾಗದಲ್ಲಿ ದಲಿತರು ಕೂಲಿ ಮಾಡಿ ಬದುಕುತ್ತಿದ್ದಾರೆ. ಅಲ್ಲದೇ ಸಾಮಾಜಿಕವಾಗಿ ಬಹಿಷ್ಕಾರ ಹಾಕುವಂತಹ ಸ್ಥಿತಿ ನಿರ್ಮಾಣಗೊಂಡಿದೆ.
ರಾಜಕೀಯ ಪಕ್ಷಗಳು ದಲಿತರನ್ನು ಉಪಯೋಗಿಸಿ ಅವರನ್ನು ತುಳಿಯುವ ಮನಸ್ಥಿತಿ ಸೃಷ್ಠಿಸಿದ್ದಾರೆ. ಅನೇಕ ಬಾರಿ ಸರ್ಕಾರ ಮತ್ತು ಸಚಿವರ ಮುಂದೆ ಪ್ರತಿಭಟನೆ ನಡೆಸಿದರೂ ನಮಗೆ ನ್ಯಾಯ ದೊರಕಿಲ್ಲ ಎಂದು ಅವರು ಅಳಲು ತೋಡಿಕೊಂಡರು.
ನಮಗೆ ಆಶ್ವಾಸನೆ ಬೇಡ. ರಾಜ್ಯದಲ್ಲಿರುವ 156 ಪರಿಶಿಷ್ಟ ಜಾತಿಯ ಸುಮಾರು 1ಕೋಟಿ 60 ಲಕ್ಷ ಜನಸಂಖ್ಯೆ ಇರುವ ಸಮುದಾಯಕ್ಕೆ ನ್ಯಾಯ ದೊರಕಿಸಬೇಕು, ಸಮುದಾಯಕ್ಕೆ ಇರುವ ಕೇಂದ್ರದ ಕಾನೂನನ್ನು ಜಾರಿಗೆ ತರುವ ತನಕ ಧರಣಿ ಕೂರುತ್ತೇವೆ ಎಂದರು.
1989ರ ಎಸ್ ಸಿ ಎಸ್ ಟಿ ದೌರ್ಜನ್ಯ ನಿಷೇಧ ಕಾಯಿದೆ ಅಡಿಯಲ್ಲಿ ಬರುವ ಸಂತ್ರಸ್ತರು, ಕುಟುಂಬದ ಸದಸ್ಯರು ಮತ್ತು ಅವಲಂಬಿತರಿಗೆ ಮೂಲಭೂತ ಸೌಕರ್ಯಗಳ ಒದಗಿಸುವುದು, ದೌರ್ಜನ್ಯ ನಿಷೇಧ ಕಾಯಿದೆಯನ್ನು ಜಾರಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿ ಪ್ರತಿಭಟನೆಗೆ ನಿರತರಾಗಿದ್ದೇವೆ.
ವಿವಿಧ ಸಚಿವರ ಮನೆಯ ಮುಂದೆ, ಕಬ್ಬನ್ ಪಾರ್ಕ್, ವಿಧಾನಸೌಧಗಳಲ್ಲಿಯೂ ನಾವು ಪ್ರತಿಭಟನೆ ನಡೆಸಿದ್ದೇವೆ. ಎಲ್ಲಾ ಪಕ್ಷಗಳ ಸರ್ಕಾರಗಳಿಗೂ ನೂರಾರು ಬಾರಿ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಕ್ಷಣ ಈ ಬಗ್ಗೆ ಎಚ್ಚರವಹಿಸಿ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮಾಡು ಇಲ್ಲವೇ ಮಡಿ ಎನ್ನುವಂತೆ ಹೋರಾಟ ಗಟ್ಟಿಗೊಳಿಸಬೇಕಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ರಾಜಗಿರಿ ಹೇಳಿದರು.
ಇನ್ನು ಪ್ರತಿಭಟನೆಯ ಸಂದರ್ಭ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮನೆಯಲ್ಲಿರದೇ ಬೆಂಗಳೂರಿನಲ್ಲಿದ್ದಾರೆಂದು ತಿಳಿದು ಬಂದಿದೆ. ಶ್ರೀನಿವಾಸ ಪೂಜಾರಿ ಬರುವ ತನಕ ಪ್ರತಿಭಟನೆ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ನಾಗರಾಜ್, ಜಗದೀಶ್, ನರಸಪ್ಪ, ಪೂಜಾರಿ ಕಿಟ್ಟಿ ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.