ಡೈಲಿ ವಾರ್ತೆ:16 ಮಾರ್ಚ್ 2023

ಕುಂದಾಪುರ: ಅಕ್ರಮ ಮರಳುಗಾರಿಕೆ ವಿರುದ್ದ ಲೋಕಾಯುಕ್ತಕ್ಕೆ ದೂರು: ಮರಳು ಮಾಫಿಯದಿಂದ ದೂರುದಾರರಿಗೆ ಜೀವ ಬೆದರಿಕೆ ಕರೆ- ಪ್ರಕರಣ ದಾಖಲು

ಕೋಟ: ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಮರಳು ಮಾಫಿಯಾದವರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕುಂದಾಪುರ ತಾಲೂಕಿನ ಮೊಳಹಳ್ಳಿ ನಿವಾಸಿ ಪ್ರತಾಪ್ ಶೆಟ್ಟಿ (32) ಎಂಬವರು ಪೊಲೀಸ್ ವರಿಷ್ಟಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಹಳ್ನಾಡು ಮತ್ತು ಬಳ್ಕೂರು ಪ್ರದೇಶದಲ್ಲಿ ಸಕ್ರಮದ ಸೋಗಿನಲ್ಲಿ ಮಾಫಿಯಾದವರಿಂದ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಪರಿಶೀಲಿಸಿ, ಅಕ್ರಮ ಮರಳು ದಂಧೆಕೋರರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಶೆಟ್ಟಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ವಿಷಯ ತಿಳಿದ ಮರಳು ಮಾಫಿಯಾದವರಿಂದ ಇದೀಗ ಪ್ರತಾಪ್ ಶೆಟ್ಟಿಗೆ ವಿವಿಧ ನಂಬರ್ ಗಳಿಂದ ಬೆದರಿಕೆ ಕರೆಗಳು ಬರತೊಡಗಿವೆ ಎನ್ನಲಾಗಿದೆ.
ಮರಳು ಮಾಫಿಯಾಕ್ಕೆ ಸಂಬಂಧಪಟ್ಟವರು ಮತ್ತವರ ಬೆಂಬಲಿಗರಿಂದ ಮಾರ್ಚ್ 16 ರಂದು ಬೆಳಿಗ್ಗೆ ಯಿಂದ ಪ್ರತಾಪ್ ಶೆಟ್ಟಿ ಅವರ ಮೊಬೈಲ್ ಗೆ ಜೀವ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ಬೈದು ಕರೆ ಬಂದಿರುತ್ತದೆ.

ಬೆದರಿಕೆ ಕರೆ ಬಂದ ಫೋನ್ ನಂಬರ್ ಗಳನ್ನು ದಾಖಲಿಸಿ ಇದೀಗ ಪ್ರತಾಪ್ ಶೆಟ್ಟಿ ಮಾಫಿಯಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.