ಡೈಲಿ ವಾರ್ತೆ:16 ಮಾರ್ಚ್ 2023

7 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಶರಣು

ತಿರುವನಂತಪುರಂ: 7 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಉಪ್ಪುತಾರ ಪಂಚಾಯತ್‌ನ ಕೈತಪಾಠಲ್ ನಲ್ಲಿ ಗುರುವಾರ ( ಮಾ.16 ರಂದು) ಮುಂಜಾನೆ ನಡೆದಿದೆ. ತಾಯಿ ಲಿಜಿ (38) ಮತ್ತು ಆಕೆಯ ಮಗ ಬೆನ್ ಟಾಮ್ (7) ಮೃತರು.

ಒಂದು ದಿನದ ಹಿಂದೆಯಷ್ಟೇ ಲಿಜಿ ಅವರ 28 ದಿನದ ನವಜಾತ ಶಿಶು ಹಾಲು ಕುಡಿಯುವಾಗ ಉಸಿರುಗಟ್ಟಿ ಮೃತಪಟ್ಟಿದೆ. ಬುಧವಾರವೇ ಮಗುವಿನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಅದೇ ದುಃಖದಲ್ಲಿ ಮೌನವಾಗಿಯೇ ಇದ್ದ ಲಿಜಿ ತನ್ನ ಮನೆಯವರು ಗುರುವಾರ ಚರ್ಚ್‌ ಗೆಂದು ಹೋಗುವಾಗ, ಲಿಜಿ ಹಾಗೂ ಮಗ ಇಬ್ಬರು ಚರ್ಚ್‌ಗೆ ಹೋಗದೆ ಮನೆಯಲ್ಲೇ ಇದ್ದರು.

ಮನೆಯವರು ಚರ್ಚ್‌ ನಿಂದ ವಾಪಾಸ್‌ ಬರುವಾಗ ಮನೆಯಲ್ಲಿ ಲಿಜಿ ಹಾಗೂ ಬೆನ್‌ ಟಾಮ್‌ ಇಲ್ಲದಿರುವುದನ್ನು ನೋಡಿದ್ದಾರೆ. ಎಲ್ಲೆಡೆ ಹುಡುಕಿದಾಗ ಕೊನೆಗೆ ಬಾವಿಯಲ್ಲಿ ಇಬ್ಬರು ಇರುವುದು ಪತ್ತೆಯಾಗಿದೆ. ಅಗ್ನಿಶಾಮಕ ದಳದವರು ಬಂದು ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಲಿಜಿ ಅವರ ಹಿರಿಯ ಮಗ ಬೆನ್‌ ಟಾಮ್‌ ಅವರಿಗೆ ಹೃದಯರೋಗದ ಸಮಸ್ಯೆ ಇತ್ತು ಎಂದು ವರದಿ ತಿಳಿಸಿದೆ.