ಡೈಲಿ ವಾರ್ತೆ:21 ಮಾರ್ಚ್ 2023

ಪಡುಬಿದ್ರಿ: ಮಟ್ಕಾ ಅಡ್ಡೆಗೆ ಪೊಲೀಸರ ದಾಳಿ: ಇಬ್ಬರು ಬಂಧನ

ಪಡುಬಿದ್ರಿ: ಪಡುಬಿದ್ರಿ ಮಾರುಕಟ್ಟೆ ಪ್ರದೇಶದ ಫ್ಯಾನ್ಸಿ ಸ್ಟೋರ್‌ ಪಕ್ಕದಲ್ಲಿ ವ್ಯವಸ್ಥಿತವಾಗಿ ಹಲವಾರು ತಿಂಗಳುಗಳಿಂದ ನಡೆಸಲಾಗುತ್ತಿದ್ದ ಮಟ್ಕಾ ಚೀಟಿ ವ್ಯವಹಾರದ ಸ್ಥಳಕ್ಕೆ ಖಚಿತ ಮಾಹಿತಿಯಂತೆ ಪಡುಬಿದ್ರಿ ಪೊಲೀಸ್‌ ಠಾಣೆಯ ತನಿಖಾ ಎಸ್‌ಐ ಎಸ್‌. ಶಿವರುದ್ರಮ್ಮ ಅವರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಡಿಪಟ್ಣ ನಿವಾಸಿ ಮಾಧವ ಕೋಟ್ಯಾನ್‌ (45)ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತ ತಾನು ಪಣಿಯೂರಿನ ಮನೋಜ್‌ ಕೋಟ್ಯಾನ್‌ (44) ಪರವಾಗಿ ಹಣ ಸಂಗ್ರಹಿಸುತ್ತಿರುವುದಾಗಿ ಪೊಲೀಸರಲ್ಲಿ ತಿಳಿಸಿದ್ದಾನೆ. 1,150 ರೂ. ನಗದು, ಪರಿಕರಗಳು ಮತ್ತು ಒಂದು ಮೊಬೈಲ್‌ ಫೋನನ್ನು ಸ್ವಾಧೀನಪಡಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಹಲವು ಕಡೆ ನಿರಂತರ ಮಟ್ಕಾ ಜುಗಾರಿ
ಪೇಟೆ ಭಾಗ ಮಾತ್ರವಲ್ಲದೆ ಪಡುಬಿದ್ರಿಯ ಇನ್ನೂ ಹಲವು ಕಡೆಗಳಲ್ಲಿ ಟೇಬಲ್‌, ಚಯರ್‌ ಹಾಕಿ ಚಾರ್ಟ್‌ಗಳನ್ನೂ ಗೋಡೆಗಳಿಗೆ ಅಂಟಿಸಿ ಒಂದೇ ಕಡೆಗಳಲ್ಲಿ ನಾಲ್ಕೈದು ಜನ ಸೇರಿಕೊಂಡು ಮಟ್ಕಾ ಜುಗಾರಿಯನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಡಿಸಿಐಬಿ ತಂಡಗಳು ರೇಡ್‌ಗಳನ್ನು ನಡೆಸಿ ಮಟ್ಕಾ ಜುಗಾರಿಯನ್ನು ತಹಬಂದಿಗೆ ತಂದಿದ್ದರು. ಇತ್ತೀಚಿನ ಸಮಯಗಳಲ್ಲಿ ಕಾಟಾಚಾರಕ್ಕೆ “ಫಿಕ್ಸ್‌’ ರೇಡ್‌ಗಳು ನಡೆಯುತ್ತಿವೆ. ಈ ಕಾರಣದಿಂದ ಒಂದೆರಡು ದಿನ ಬಂದ್‌ ಆಗಿ ಮತ್ತೆ ಈ ಜುಗಾರಿ ತಲೆಯೆತ್ತುತ್ತಿವೆ. ಪಡುಬಿದ್ರಿ ಐದಾರು ಕಡೆಗಳಲ್ಲಿ ಮಟ್ಕಾ ನಿರಂತರವಾಗಿ ನಡೆಯುತ್ತಿದೆ. ಅಲ್ಲಲ್ಲಿ ಅವರ ಗೂಂಡಾ ಪ್ರವೃತ್ತಿಯೂ ಹೆಚ್ಚುತ್ತಲಿದೆ. ಪೊಲೀಸ್‌ ಅಧಿಕಾರಿಗಳು, ಗುಪ್ತಚರ ಅಧಿಕಾರಿಗಳಿಗೆ ಕೂಡ ಈ ಬಗ್ಗೆ ಮಾಹಿತಿ ಇದ್ದರೂ ಸುಮ್ಮನಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.