ಡೈಲಿ ವಾರ್ತೆ:22 ಮಾರ್ಚ್ 2023
ಉಳ್ಳಾಲ: ರಾಸಾಯನಿಕ ಸಾಗಾಟದ ಟ್ಯಾಂಕರ್ ಪಲ್ಟಿ; ಗ್ಯಾಸ್ ಲೀಕೇಜ್ ನಡುವೆ ತಡರಾತ್ರಿವರೆಗೆ ನಡೆದ ತೆರವು ಕಾರ್ಯಾಚರಣೆ!
ಉಳ್ಳಾಲ: ಕೇರಳದ ಕೊಚ್ಚಿಯಿಂದ ಬೈಕಂಪಾಡಿ ಪೈಂಟ್ ತಯಾರಿಕಾ ಇಂಡಸ್ಟ್ರಿ ಗೆ ರಾಸಾಯನಿಕ ಸಾಗಾಟ ನಡೆಸುತ್ತಿದ್ದ ಟ್ಯಾಂಕರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ತಡರಾತ್ರಿ ವೇಳೆ ಸಂಭವಿಸಿದೆ.
ಹೆದ್ದಾರಿ ಮದ್ಯೆಯೇ ಪಲ್ಟಿಯಾಗಿ ಬಿದ್ದು ಚಾಲಕ ಮಯೂರ್ (40) ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅವರನ್ನು ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೆರವು ಕಾರ್ಯಾಚರಣೆ !
ಲಾರಿ ಹಾಗೂ ಗ್ಯಾಸ್ ಹೊಂದಿದ್ದ ಟ್ಯಾಂಕರ್ ತೆರವು ಕಾರ್ಯಾಚರಣೆ ತಡರಾತ್ರಿ 1 ಗಂಟೆಯವರೆಗೆ ನಡೆಯಿತು. ಅಗ್ನಿ ಶಾಮಕ ದಳ, ಎಸಿಪಿ ಧನ್ಯಾ ಎನ್. ನಾಯಕ್, ದಕ್ಷಿಣ ಸಂಚಾರಿ ಠಾಣೆಯ ರಮೇಶ್ ಹಾನಾಪುರ್, ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಯಸ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಿತು. ನಡು ರಸ್ತೆಯಲ್ಲೇ ಉರುಳಿದ್ದ ರಾಸಾಯನಿಕ ಟ್ಯಾಂಕರಿನಿಂದ ಸಣ್ಣ ಪ್ರಮಾಣದಲ್ಲಿ ಸೋರಿಕೆ ಉಂಟಾಗಿ ಪರಿಸರವಿಡೀ ದುರ್ವಾಸನೆ ಬೀರುತಿತ್ತು. ಸ್ಥಳಕ್ಕಾಗಮಿಸಿದ ಬೈಕಂಪಾಡಿ ಬಿಎಎಸ್ ಎಫ್ ಸುರಕ್ಷಾ ತಂಡ ಸಮೀಪದ ವಾಣಿಜ್ಯ ಮಳಿಗೆಗಳ ವಿದ್ಯುತ್ ದೀಪಗಳನ್ನು ಆರಿಸಲು ಸೂಚನೆ ನೀಡಿತು. ರಾ.ಹೆ.66 ರ ಎರಡೂ ಕಡೆಗಳಲ್ಲಿ ವಾಹನಗಳು ಸಂಚರಿಸದಂತೆ ಸಂಚಾರಿ ಠಾಣಾ ಪೊಲೀಸರು ತಡೆಹಿಡಿದಿದ್ದರು. ಬಿಎಎಸ್ ಎಫ್ ನಿಂದ ಬಂದ ಬೃಹತ್ ಗಾತ್ರದ ಕ್ರೇನ್ ಸಹಿತ ಎರಡು ಸಣ್ಣ ಕ್ರೇನ್ ಗಳನ್ನು ಬಳಸಿಕೊಂಡು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ , ಮೊದಲಿಗೆ ಲಾರಿಯನ್ನು ಮೇಲಕ್ಕೆತ್ತಿ, ಆನಂತರ ಟ್ಯಾಂಕರನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ, ಇನ್ನೊಂದು ಲಾರಿಗೆ ಲೋಡ್ ಮಾಡಿ ತಕ್ಷಣ ಕಳುಹಿಸಲಾಯಿತು. ರಾಸಾಯನಿಕ ಹೊಂದಿರುವ ಟ್ಯಾಂಕ್ ಹಲವು ಪದರಗಳು ಹಾಗೂ ಸುತ್ತಲೂ ಕಬ್ಬಿಣದ ಸುರಕ್ಷಾ ಕವಚ ಇರುವುದರಿಂದ ಸಣ್ಣ ಪ್ರಮಾಣದಲ್ಲಿ ಸೋರಿಕೆ ಉಂಟಾಗಿದೆ. ಸಾಬೂನಿಗೆ ಹಾಕುವ ರಾಸಾಯನಿಕ ಆಗುವುದರಿಂದ ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ ಎಂದು ಬಿಎಎಸ್ ಎಫ್ ಸೇಫ್ಟಿ ಆಫೀಸರ್ ತಿಳಿಸಿದ್ದಾರೆ. ಯಶಸ್ವಿ ತೆರವು ಕಾರ್ಯಾಚರಣೆ ನಂತರ ಸ್ಥಳೀಯರು ನಿಟ್ಟುಸಿರು ಬಿಡುವಂತಾಯಿತು. ಉಳ್ಳಾಲ ಶಾಸಕ ಯು.ಟಿ ಖಾದರ್ ಅವರು ಬೆಂಗಳೂರು ಭೇಟಿಯಲ್ಲಿದ್ದರೂ ಆಪ್ತಸಹಾಯಕ ಪ್ರವೀಣ್ ಅವರನ್ನು ಸ್ಥಳಕ್ಕೆ ಕಳುಹಿಸಿ ತೆರವು ಕಾರ್ಯಾಚರಣೆ ಕುರಿತು ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಂಡರು.