ಡೈಲಿ ವಾರ್ತೆ:28 ಮಾರ್ಚ್ 2023

ಮಸೀದಿಗೆ ನುಗ್ಗಿ ‘ಜೈ ಶ್ರೀ ರಾಮ್‌’ ಹೇಳಲು ನಿರಾಕರಿಸಿದ ಇಮಾಮ್‌ಗೆ ಹಲ್ಲೆಗೈದು, ಗಡ್ಡ ಕತ್ತರಿಸಿದ ದುಷ್ಕರ್ಮಿಗಳು

ಹೊಸದಿಲ್ಲಿ: ಮಹಾರಾಷ್ಟ್ರದ ಅನ್ವ ಗ್ರಾಮದಲ್ಲಿ ಮಸೀದಿಗೆ ನುಗ್ಗಿದ ಗುಂಪೊಂದು ಅಲ್ಲಿ ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಇಮಾಮ್‌ಗೆ ‘ಜೈ ಶ್ರೀ ರಾಮ್‌’ ಹೇಳಲು ಬಲವಂತಪಡಿಸಿ ನಂತರ ಹಲ್ಲೆಗೈದ ಘಟನೆ ವರದಿಯಾಗಿದೆ. ಘಟನೆ ರವಿವಾರ ಸಂಜೆ ಸುಮಾರು 7.30 ಕ್ಕೆ ನಡೆದಿದೆ ಎಂದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಇಮಾಮ್‌ ಝಕೀರ್‌ ಸಯ್ಯದ್‌ ಖಾಜಾ ಹೇಳಿದ್ದಾರೆ. ಈ ಸಂದರ್ಭ ತಾನು ಮಸೀದಿಯೊಳಗೆ ಕುಳಿತುಕೊಂಡು ಕುರ್ ಆನ್‌ ಓದುತ್ತಿದ್ದುದಾಗಿ ಅವರು ತಿಳಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ಮುಖಕ್ಕೆ ಬಟ್ಟೆಗಳನ್ನು ಸುತ್ತಿದ್ದ ಅಪರಿಚಿತರ ಗುಂಪೊಂದು ಮಸೀದಿ ಪ್ರವೇಶಿಸಿ ‘ಜೈ ಶ್ರೀ ರಾಮ್‌’ ಹೇಳಲು ನಿರಾಕರಿಸಿದ ಇಮಾಮ್‌ ಮೇಲೆ ಹಲ್ಲೆ ನಡೆಸಿದ್ದರು. ನಂತರ ಪ್ರಜ್ಞೆ ತಪ್ಪಿಸಲು ರಾಸಾಯನಿಕ ಬೆರೆಸಿದ ಬಟ್ಟೆ ಬಳಸಿದ್ದರು ಎಂದು ಇಮಾಮ್‌ ಹೇಳಿದ್ದಾರೆ. ತಮಗೆ ಎಚ್ಚರವಾದಾಗ ತಮ್ಮ ಗಡ್ಡ ಕತ್ತರಿಸಿರುವುದು ತಿಳಿದು ಬಂತು ಎಂದು ಅವರು ಹೇಳಿದ್ದಾರೆ.

ಜನರು ಮಸೀದಿಗೆ ರಾತ್ರಿ 8 ಗಂಟೆಗೆ ಬಂದಾಗ ಇಮಾಮ್ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ನೋಡಿ ಸಿಲ್ಲೊಡ್‌ ಎಂಬಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಅವರನ್ನು ಔರಂಗಾಬಾದ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ ಸೆಕ್ಷನ್‌ 452, 323 ಮತ್ತು 34 ಅನ್ವಯ ಬೋಕರ್ಡನ್‌ ಇಲ್ಲಿನ ಪರಧ್‌ ಠಾಣೆಯಲ್ಲಿ ದಾಖಲಿಸಲಾಗಿದೆ.

ಘಟನೆ ನಂತರ ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್ತ್‌ ಅನ್ನು ಹೆಚ್ಚಿಸಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಮಾಜವಾದಿ ಪಕ್ಷದ ಶಾಸಕ ಅಬು ಆಸಿಂ ಅಝ್ಮಿ ಅವರು ಮಹಾರಾಷ್ಟ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.